ರಾಜಕೀಯಕ್ಕೆ ನಟ ವಿಜಯ್ ಎಂಟ್ರಿ

ರಾಜಕೀಯಕ್ಕೆ ನಟ ವಿಜಯ್ ಎಂಟ್ರಿ

ಚೆನ್ನೈ, ಫೆ. 2: ತಮಿಳು ನಟ ದಳಪತಿ ವಿಜಯ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಅವರ ನೂತನ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರನ್ನು ಘೋಷಿಸಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ವಿಜಯ್ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿತ್ತು. ಇದೀಗ ಶುಕ್ರವಾರ ತಮ್ಮ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ.

ತಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಇತ್ತೀಚೆಗೆ ನಡೆದ ಪಕ್ಷದ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ನಿರ್ಧರಿಸಿದಂತೆ ಟಿವಿಕೆ ಯಾವ ಬಣವನ್ನೂ ಬೆಂಬಲಿಸುವುದಿಲ್ಲ ಎಂದು ವಿಜಯ್‌ ತಿಳಿಸಿದ್ದಾರೆ.

“ನಾನು ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ ಮತ್ತು ಸಾರ್ವಜನಿಕ ಸೇವೆಯ ರಾಜಕೀಯದಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಇದು ತಮಿಳುನಾಡಿನ ಜನರಿಗೆ ನನ್ನ ಕೃತಜ್ಞತೆ ಎಂದು ನಾನು ಪರಿಗಣಿಸುತ್ತೇನೆ” ಎಂದು ವಿಜಯ್ ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಜಯ್ ರಾಜಕೀಯ ಪಕ್ಷ ಘೋಷಣೆ ಮಾಡುವ ಮೂಲಕ ತಮಿಳುನಾಡಿನಲ್ಲಿ ಸಿನಿಮಾ ರಂಗದಿಂದ ರಾಜಕೀಯ ಪ್ರವೇಶಿಸಿದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಸೇರಿದಂತೆ ಪ್ರಮುಖರ ಪಟ್ಟಿಗೆ ಸೇರಿದ್ದಾರೆ. ತಮಿಳು ಚಿತ್ರರಂಗದ ಮುಂದಿನ ರಜನಿಕಾಂತ್ ಎನಿಸಿಕೊಂಡಿರುವ ವಿಜಯ್, ಇದುವರೆಗೆ 68 ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ಉಚಿತ ಆಹಾರ, ವಿದ್ಯಾರ್ಥಿ ವೇತನ ವಿತರಣೆ, ಗ್ರಂಥಾಲಯ, ಸಂಜೆ ಕಾಲೇಜು ಆರಂಭ, ಕಾನೂನು ಸಹಾಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ವಿಜಯ್‌ ತಮ್ಮ ಅಭಿಮಾನಿ ಸಂಘಗಳ ಮೂಲಕ ಮಾಡಿಸುತ್ತಿದ್ದಾರೆ.

Previous Post
5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು
Next Post
ಹರ್ಷ ಮಂದರ್ ನಿವಾಸದ ಮೇಲೆ ಸಿಬಿಐ ದಾಳಿ

Recent News