ರಾಮಮಂದಿರ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯಲು ಪ್ರಮುಖ ಹಿಂದೂ ಸ್ವಾಮೀಜಿಗಳು ನಿರ್ಧಾರ

ರಾಮಮಂದಿರ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯಲು ಪ್ರಮುಖ ಹಿಂದೂ ಸ್ವಾಮೀಜಿಗಳು ನಿರ್ಧಾರ

ನವದೆಹಲಿ, ಜನವರಿ 12: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಾಜರಾಗಲು ಹಲವು ಹಿಂದೂ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು, ಪುರಿಯ ಗೋವರ್ಧನ ಮಠದ ಮಠಾಧೀಶರು ರಾಮಲಾಲ ವಿಗ್ರಹವನ್ನು ಪ್ರತಿಷ್ಠಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ನಿರಾಕರಿಸಿದ ದಿನಗಳ ನಂತರ, ಉತ್ತರಾಖಂಡದ ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶಂಕರಾಚಾರ್ಯರ 4 ಪೀಠಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ದೇವಾಲಯದ ನಿರ್ಮಾಣವು ಅಪೂರ್ಣವಾಗಿರುವುದರಿಂದ ಈ ಸಮಾರಂಭವನ್ನು “ಶಾಸ್ತ್ರಗಳ ವಿರುದ್ಧ” ಅಥವಾ ಪವಿತ್ರ ಹಿಂದೂ ಧರ್ಮಗ್ರಂಥಗಳಿಗೆ ವಿರುದ್ಧವಾಗಿ ನಡೆಸಲಾಗುತ್ತಿದೆ ಎಂದು ತಮ್ಮ ಅಧಿಕೃತ ಹ್ಯಾಂಡಲ್‌ನಲ್ಲಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ. ಶಂಕರಾಚಾರ್ಯರು 8ನೇ ಶತಮಾನದ ಹಿಂದೂ ಸಂತ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದ ಭಾಗವಾಗಿರುವ ನಾಲ್ಕು ಮಠಗಳ ಮಠಾಧೀಶರಾಗಿದ್ದಾರೆ. ಜ್ಯೋತಿರ್ ಮಠ (ಜೋಶಿಮಠ) ಮತ್ತು ಗೋವರ್ಧನ ಮಠ, ಶೃಂಗೇರಿ ಶಾರದ ಪೀಠ (ಶೃಂಗೇರಿ, ಕರ್ನಾಟಕ), ಮತ್ತು ದ್ವಾರಕಾ ಶಾರದ ಪೀಠ (ದ್ವಾರಕಾ, ಗುಜರಾತ್) ಇವೇ ನಾಲ್ಕು ಮಠಗಳು. ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯರಾದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ತಮ್ಮ ವಿಡಿಯೊದಲ್ಲಿ, ನಾಲ್ಕು ಶಂಕರಾಚಾರ್ಯರ ಪೀಠದ ನಿರ್ಧಾರವನ್ನು “ಮೋದಿ ವಿರೋಧಿ” ಎಂದು ಅರ್ಥೈಸಬಾರದು. ನಾವು “ಶಾಸ್ತ್ರ ವಿರೋಧಿ” ಆಗಲು ಬಯಸುವುದಿಲ್ಲ ಎಂದಿದ್ದಾರೆ. ರಾಜಕೀಯ ನಾಯಕರು ಜನವರಿ 22 ರಂದು ಅಯೋಧ್ಯೆಗೆ ಹೋಗದಿರುವುದು ಅವರ ರಾಜಕೀಯ ನಿರ್ಬಂಧಗಳಿಂದಾಗಿರಬಹುದು, ಆದರೆ ಅಂತಹ ಯಾವುದೇ ನಿರ್ಬಂಧಗಳು ನನ್ನನ್ನು ಬಂಧಿಸುವುದಿಲ್ಲ. ದೇಶದಲ್ಲಿ ಗೋಹತ್ಯೆ ಕೊನೆಯಾದಾಗ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ, ಉತ್ಸಾಹದಿಂದ ಆಚರಿಸುತ್ತೇನೆ ಎಂದು ತಿಳಿಸಿದರು. ಶಾಸ್ತ್ರ-ವಿಧಿಯನ್ನು (ಶಾಸ್ತ್ರಗಳ ಆಚರಣೆಗಳು) ಅನುಸರಿಸುವುದು ಮತ್ತು ಅವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ. ಇಲ್ಲಿ ಶಾಸ್ತ್ರ-ವಿಧಿಯನ್ನು ಕಡೆಗಣಿಸಲಾಗುತ್ತಿದೆ. ದೇವಾಲಯವು ಇನ್ನೂ ಅಪೂರ್ಣವಾಗಿರುವಾಗ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ ಸಮಸ್ಯೆ. ನಾವು ಇದನ್ನು ಹೇಳಿದರೆ, ನಮ್ಮನ್ನು ‘ಮೋದಿ ವಿರೋಧಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಮೋದಿ ವಿರೋಧಿ ಏನಿದೆ ಎಂದು ಕೇಳಿದ್ದಾರೆ.

ಪುರಿಯ ಗೋವರ್ಧನ ಮಠದ ಮುಖ್ಯಸ್ಥ ನಿಶ್ಚಲಾನಂದ ಸರಸ್ವತಿ ಅವರು ತಮ್ಮ ಸ್ಥಾನದ ಘನತೆಯ ಬಗ್ಗೆ ಜಾಗೃತರಾಗಿರುವ ಕಾರಣ” ಸಮಾರಂಭದಿಂದ ಹೊರಗುಳಿಯುವುದಾಗಿ ಘೋಷಿಸಿದ ಕೆಲವು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ. ನಾನು ಅಲ್ಲಿ ಹೋಗಿ ಮಾಡುವುದೇನಿದೆ? ಮೋದಿಜಿ ಉದ್ಘಾಟಿಸಿ ಮೂರ್ತಿಗೆ ನಮಸ್ಕರಿಸುವಾಗ ನಾನು ಅಲ್ಲಿ ನಿಂತು ಚಪ್ಪಾಳೆ ತಟ್ಟಲೇ? ನನಗೆ ಸ್ಥಾನ ಬೇಡ. ನಾನು ಈಗಾಗಲೇ ದೊಡ್ಡ ಸ್ಥಾನ ಹೊಂದಿದ್ದೇನೆ. ನನಗೆ ಕ್ರೆಡಿಟ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದೇಶದ ಪ್ರಧಾನಿಯವರು ಗರ್ಭಗುಡಿಯಲ್ಲಿದ್ದು, ವಿಗ್ರಹವನ್ನು ಸ್ಪರ್ಶಿಸುತ್ತಾರೆ ಮತ್ತು ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭ ಉದ್ಘಾಟಿಸುತ್ತಾರೆ. ಇದಕ್ಕೆ ರಾಜಕೀಯ ರಂಗು ನೀಡಲಾಗಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಬೇಕಾದರೆ, ಅದು ನಿಯಮ ಪ್ರಕಾರವಾಗಿರಬೇಕು. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅರ್ಧ-ಸತ್ಯ ಮತ್ತು ಅರ್ಧ-ಸುಳ್ಳನ್ನು ಬೆರೆಸಬಾರದು ಎಲ್ಲವೂ ಧರ್ಮಗ್ರಂಥದ ಜ್ಞಾನದೊಂದಿಗೆ ಹೊಂದಿಕೊಳ್ಳಬೇಕು ಎಂದು ನಿಶ್ಚಲಾನಂದ್ ಸ್ವಾಮೀಜಿ ಅವರು ಹೇಳಿದರು.

Previous Post
Swachh Survekshan-2023: ಸ್ವಚ್ಛತೆಯಲ್ಲಿ ಬೆಂಗಳೂರಿಗೆ ಮತ್ತೊಂದು ಗೌರವ, ಎಷ್ಟನೇ ಸ್ಥಾನ?
Next Post
ಮೈದಾನದಲ್ಲೇ ಗಿಲ್ ವಿರುದ್ಧ ಉಗ್ರರೂಪ ತಾಳಿದ ರೋಹಿತ್ ಶರ್ಮಾ

Recent News