ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಿಯಾ, ಖರ್ಗೆ ಭಾಗವಹಿಸಲ್ಲ: ಕಾಂಗ್ರೆಸ್‌ ಸ್ಪಷ್ಟನೆ

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಿಯಾ, ಖರ್ಗೆ ಭಾಗವಹಿಸಲ್ಲ: ಕಾಂಗ್ರೆಸ್‌ ಸ್ಪಷ್ಟನೆ

ನವದೆಹಲಿ, ಜ. 10: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾಗಿಯಾಗುತ್ತಾರಾ ಎಂಬ ಬಗ್ಗೆ ಪ್ರಶ್ನೆಗಳು ಭುಗಿಲೆದ್ದಿದ್ದವು. ಈ ವಿಚಾರದಲ್ಲಿ ಕಾಂಗ್ರೆಸ್‌ ಸೂಕ್ತ ಸಮಯದಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿತ್ತು. ಇದೀಗ ಕೊನೆಗೂ ಕಾಂಗ್ರೆಸ್‌ ರಾಮಮಂದಿರ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ತಮ್ಮ ನಿಲುವನ್ನು ಬಹಿರಂಗಪಡಿಸಿದೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ ರಾಮಮಂದಿರ ಉದ್ಘಾಟಣೆ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಬುಧವಾರ ಘೋಷಿಸಿದೆ, ಇದು ಆರೆಸ್ಸೆಸ್ ಮತ್ತು ಬಿಜೆಪಿಯ ಕಾರ್ಯಕ್ರಮ ಎಂದು ಕಾಂಗ್ರೆಸ್‌ ಹೇಳಿದೆ.

ಈ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಖರ್ಗೆ, ಸೋನಿಯಾ ಮತ್ತು ಚೌಧರಿ ಅವರಿಗೆ ಆಹ್ವಾನ ಬಂದಿದೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮ ಎನ್ನುವುದು ವೈಯ್ಯಕ್ತಿಕ ವಿಚಾರ. ಆದರೆ ಆರೆಸ್ಸೆಸ್‌ ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡು ಬಂದಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರು ನಿರ್ಮಾಣ ಹಂತದ ಮಂದಿರದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಸಿಪಿಐಎಂ ರಾಮಮಂದಿರ ಉದ್ಘಾಟನೆ ಸಮಾರಂಭದ ಕಾರ್ಯಕ್ರಮವನ್ನು ತಿರಸ್ಕರಿಸಿತ್ತು. ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಮಾತನಾಡಿ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಭಾಗವಹಿಸುವುದಿಲ್ಲ. ನಮ್ಮ ಪಕ್ಷವು ಧಾರ್ಮಿಕ ನಂಬಿಕೆಗಳನ್ನು ಗೌರವಿಸಲಿದೆ. ಧರ್ಮದೊಂದಿಗೆ ರಾಜಕೀಯ ಬೆರೆಸುವುದು ಸರಿಯಲ್ಲ. ಬಿಜೆಪಿ ರಾಮ ಮಂದಿರ ಉದ್ಘಾಟನೆಯನ್ನು ಸಂಪೂರ್ಣವಾಗಿ ರಾಜಕೀಯಗೊಳಿಸುತ್ತಿದೆ ಎಂದು ಹೇಳಿದ್ದರು.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದರು. ಪಕ್ಷವು ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ನಂಬುವ ಮತ್ತು ಆಚರಿಸುವ ಪ್ರತಿಯೊಬ್ಬರ ಹಕ್ಕನ್ನು ಗೌರವಿಸುತ್ತದೆ ಎಂದು ಹೇಳಿದ್ದರು.

ಆ ಬಳಿಕ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಪಶ್ಚಿಮ ಬಂಗಾಳ ಸರ್ಕಾರ ಅಥವಾ ಪಕ್ಷದ ಯಾವುದೇ ಪ್ರತಿನಿಧಿಗಳು ಹಾಜರಾಗುವುದಿಲ್ಲ. ಧರ್ಮದೊಂದಿಗೆ ರಾಜಕೀಯ ಬೆರೆಸುವುದರಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಟಿಎಂಸಿ ಹೇಳಿತ್ತು.

Previous Post
ನಿರೀಕ್ಷೆಯಂತೆ ಸಿಎಂ ಶಿಂಧೆ ಪರ ಸ್ಪೀಕರ್ ತೀರ್ಪು
Next Post
ಭಾರತ ಜೋಡೋ ನ್ಯಾಯ ಯಾತ್ರೆಗೆ ಮಣಿಪುರದಲ್ಲಿ ಅನುಮತಿ ನಿರಾಕರಿಸಿದ ಬಿಜೆಪಿ ಸರಕಾರ

Recent News