ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ ವಕೀಲನಿಗೆ ₹1ಲಕ್ಷ ದಂಡ

ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ ವಕೀಲನಿಗೆ ₹1ಲಕ್ಷ ದಂಡ

ನವದೆಹಲಿ, ಜ. 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಗೆ ಮರುನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ವಕೀಲನಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ₹1 ಲಕ್ಷ ದಂಡ ವಿಧಿಸಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ವಕೀಲ ಅಶೋಕ್ ಪಾಂಡೆ ಸಲ್ಲಿಸಿದ್ದ ಅರ್ಜಿಯು ಕ್ಷುಲ್ಲಕವಾಗಿದ್ದು, ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುವ ಯತ್ನ ಎಂದಿದೆ.

ಲೋಕಸಭೆಯ ಸದಸ್ಯರಾಗಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಪಾಂಡೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಹಿನ್ನೆಲೆ: 2019 ರಲ್ಲಿ ಕರ್ನಾಟಕದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ದ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ವರ್ಷ ಮಾರ್ಚ್‌ನಲ್ಲಿ ಲೋಕಸಭೆಯಿಂದ ಅನರ್ಹಗೊಳಿಸಿತ್ತು.

ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ “ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ದೇಶ ಭ್ರಷ್ಟರೊಂದಿಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಸೂರತ್ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ನಿಯಮಗಳ ಪ್ರಕಾರ ಅವರ ಲೋಕಸಭಾ ಸದಸ್ಯತ್ವವು ರದ್ದುಗೊಂಡಿತ್ತು.

ತನಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆಕೋರಿ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್‌ ಶಿಕ್ಷೆಗೆ ತಡೆ ನೀಡಲು ನಿರಾರಿಸಿತ್ತು. ಕೊನೆಗೆ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆಗಸ್ಟ್ 2023 ರಲ್ಲಿ, ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯವರ ಶಿಕ್ಷೆಯನ್ನು ತಡೆಹಿಡಿದಿತ್ತು. ಇದರಿಂದ ರಾಹುಲ್ ಗಾಂಧಿಯ ಸಂಸತ್‌ಗೆ ಮರು ನೇಮಕಗೊಂಡಿದ್ದರು.

Previous Post
ಜ. 22ಕ್ಕೆ ಕೊಲ್ಕತ್ತಾದಲ್ಲಿ ಐಕ್ಯತಾ ಯಾತ್ರೆಗೆ ಮಮತಾ ಕರೆ
Next Post
ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಹೊಸ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (BIETC) ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

Recent News