ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ, ಕೋಲಾರದಲ್ಲಿ ಜನವರಿ 29 ರಂದು ಪ್ರತಿಭಟನೆ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ

ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ, ಕೋಲಾರದಲ್ಲಿ ಜನವರಿ 29 ರಂದು ಪ್ರತಿಭಟನೆ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್‌ ಕಡಿತವಾಗುತ್ತಿದೆ

ಮಂಡ್ಯದಲ್ಲಿ ಹನುಮ ಧ್ವಜ ಇಳಿಸಿದ ಹಿಂದೂ ದ್ವೇಷಿ ಕಾಂಗ್ರೆಸ್‌

ಬೆಂಗಳೂರು, ಜನವರಿ 28, ಭಾನುವಾರ

ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ ಎಂಬ ಘೋಷಣೆಯೊಂದಿಗೆ ಕೋಲಾರದಲ್ಲಿ ಜನವರಿ 29 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿ ಅಧಿವೇಶನಕ್ಕೂ ಮುನ್ನ ರೈತರಿಗೆ ಬರ ಪರಿಹಾರ ಘೋಷಿಸಿದ್ದರು. ಇಷ್ಟು ಬಜೆಟ್‌ಗಳನ್ನು ಮಂಡನೆ ಮಾಡಿದ ಇವರು ಜನರಿಗೆ ಟೋಪಿ ಹಾಕುವುದು ಹೇಗೆಂದು ಕಲಿತಿದ್ದಾರೆ. ಇವರನ್ನು ಟೋಪಿ ಸಿದ್ದರಾಮಯ್ಯರೆಂದು ಕರೆಯಬಹುದು. ರೈತರು ಕಣ್ಣೀರು ಹಾಕುತ್ತಿರುವಾಗ ಮುಲ್ಲಾಗಳಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿಬಿಟ್ಟರು. ಆದರೆ ರೈತರಿಗೆ 105 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಆದ್ದರಿಂದ ಸೋಮವಾರ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.

ವಿದ್ಯುತ್‌ ಕಡಿತ, ಕಾಮಗಾರಿ ಸ್ಥಗಿತ ವಿರುದ್ಧ ಜನವರಿ 30 ರಂದು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟಿಸಲಾಗುವುದು. ಕಾಫಿ ಬೆಳೆಗಾರರಿಗೆ ಲೀಸ್‌ಗೆ ಜಮೀನು ನೀಡಿದ್ದು, ಜಿಲ್ಲಾಧಿಕಾರಿಗಳು ರೈತರಿಗೆ ನೆರವಾಗುತ್ತಿಲ್ಲ. ಇದರ ವಿರುದ್ಧವೂ ಕಾಫಿ ಬೆಳೆಗಾರರಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ. ಪ್ರತಿ ಜಿಲ್ಲೆಗಳಲ್ಲಿ ನಾನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟಿಸಲಿದ್ದೇವೆ ಎಂದರು.

ಏಳು ಗಂಟೆ ವಿದ್ಯುತ್‌ ಎಂದು ಹೇಳಿ ಮೂರು ಗಂಟೆ ನೀಡುತ್ತಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್‌ಪ್ಲೆಸ್‌ ನೀರು, ವಿದ್ಯುತ್‌ ನೀಡುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಹೋಪ್‌ಲೆಸ್‌, ಹೆಲ್ಪ್‌ಲೆಸ್‌ ಆಗಿದೆ. ಈಗ ಸರ್ಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ. ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನ ನೀಡಿ, ಮೆಡಿಕಲ್‌ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೇಮಿಸಿ ಉಡಾಫೆಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ದುಂದುವೆಚ್ಚ ಮಾಡಲು, ಮಜಾ ಮಾಡಲು ಹಣ ಇದ್ದರೂ ರೈತರಿಗೆ ಕೊಡಲು ಹಣ ಇಲ್ಲ ಎಂದು ದೂರಿದರು.

ವಿತ್ತೀಯ ಶಿಸ್ತನ್ನು ಯಾವತ್ತೂ ರಾಜ್ಯ ಸರ್ಕಾರಗಳು ದಾಟಿಲ್ಲ. ಸುಮಾರು 20-25 ವರ್ಷಗಳಿಂದ ಈ ವಿಚಾರದಲ್ಲಿ ಸರ್ಕಾರ ಮಾದರಿಯಾಗಿತ್ತು. ಇವೆಲ್ಲವೂ ಈಗ ಕಿತ್ತುಕೊಂಡು ಹೋಗಿದೆ. ವೈದ್ಯರು, ಅಂಗನವಾಡಿ ನೌಕರರಿಗೆ ನೀಡಲು ಹಣವಿಲ್ಲ, ಕಾಮಗಾರಿಗಳು ಸ್ಥಗಿತವಾಗಿದೆ. ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವನಿಧಿ ಜಾರಿಗೆ ಎಂಟು ತಿಂಗಳಾಯಿತು. ಅದರಲ್ಲೂ ಒಂದು ವರ್ಷದ ಪದವೀಧರರಿಗೆ ಮಾತ್ರ ಅನ್ವಯವಾಗುತ್ತದೆ. ಇದರಲ್ಲೂ ಭಾರಿ ಮೋಸ ನಡೆದಿದೆ. ವಿದ್ಯುತ್‌ ಎಲ್ಲರಿಗೂ ಫ್ರೀ ಎಂದು ಯಾರಿಗೂ ಕೊಡಲಿಲ್ಲ. ಇವೆಲ್ಲ ಲೋಕಸಭಾ ಚುನಾವಣೆಯವರೆಗೆ ಮಾತ್ರ ನಡೆಯಲಿದೆ ಎಂದು ಅವರ ಪಕ್ಷದವರೇ ಹೇಳುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರದ್ದೇ ನೈಜ ಗ್ಯಾರಂಟಿ. ರಾಮಮಂದಿರ ಕಟ್ಟಿಸಿದರು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದರು, ರೈತರಿಗೆ ಪ್ರತಿ ವರ್ಷ ಕಿಸಾನ್‌ ಸಮ್ಮಾನ್‌ ನೀಡುತ್ತಿದ್ದಾರೆ. ರಾಮನಗರದಲ್ಲಿ ಈವರೆಗೆ ಮಂದಿರ ಕಟ್ಟಿಸದವರು ಈಗ ಕಟ್ಟಿಸಲು ಮುಂದಾಗಿದ್ದಾರೆ. ಇಡೀ ದೇಶ ರಾಮ ಎನ್ನುವಾಗ ಮಂದಿರ ಕಟ್ಟಿಸಲು ಹೋಗುತ್ತಾರೆ. ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಕರಸೇವೆ ಮಾಡಿದೆ. ಕಾಂಗ್ರೆಸ್‌ನ ಮನೆಯಿಂದ ಒಬ್ಬರೂ ಬಂದಿಲ್ಲ ಎಂದರು.

ರಾಹುಲ್‌ ಗಾಂಧಿ ಭಾರತ್‌ ಜೋಡೋ ಮಾಡಿದಾಗ ಮೂರು ರಾಜ್ಯಗಳು ಹೋಯಿತು. ಈಗ ಯಾತ್ರೆ ಮಾಡಿದಾಗ ನಿತೀಶ್‌ ಕುಮಾರ್‌ ಕಾಂಗ್ರೆಸ್‌ ಚೋಡೋ ಎಂದಿದ್ದಾರೆ. ಆಮ್‌ ಆದ್ಮಿ ಪಕ್ಷದವರೂ ಅದನ್ನು ಹೇಳಿದ್ದಾರೆ. ಇವರು ಕಾಲಿಟ್ಟಲೆಲ್ಲ ಸರ್ಕಾರ ಬೀಳುತ್ತದೆ. ಇವರಿನ್ನೂ ಮುಂದಕ್ಕೆ ಬಂದು ಕಾಂಗ್ರೆಸ್‌ನ ಸರ್ಕಾರಗಳನ್ನು ಬೀಳಿಸಲಿ ಎಂದರು.
ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದು ಕಾಂಗ್ರೆಸ್‌ ಸಚಿವರೇ ಸಹಿ ಹಾಕಿದ್ದಾರೆ. ಸಿದ್ದರಾಮಯ್ಯನವರು ಆಗಲೇ ರಾಜೀನಾಮೆ ನೀಡಬೇಕಿತ್ತು. ಇನ್ನು ವರದಿ ಜಾರಿ ಮಾಡಿದರೆ ಅದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಹನುಮ ಧ್ವಜ ಹಾರಿಸಲು ಆಗ್ರಹ

ಮಂಡ್ಯದಲ್ಲಿ ಹನುಮ ಧ್ವಜವನ್ನು ಕಾಂಗ್ರೆಸ್‌ನವರು ಧ್ವಂಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್‌ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್‌ ಶಿವನ ಪುತ್ರ ಎಂದರು. ಹೃದಯದಲ್ಲಿ ಟಿಪ್ಪು ಸುಲ್ತಾನ್‌ ತುಂಬಿಕೊಂಡಿದ್ದು, ಹನುಮನಿಗೆ ಎಷ್ಟು ಗೌರವ ಕೊಡುತ್ತಾರೆ ಎಂದು ಈಗ ಗೊತ್ತಾಗಿದೆ. ಏಕಾಏಕಿ ಪೊಲೀಸರನ್ನು ಕರೆಸಿ ಧ್ವಜ ಏಕೆ ತೆಗೆಸಬೇಕಿತ್ತು? ಇದು ಕಾಂಗ್ರೆಸ್‌ಗೆ ರಾಮನ ಬಗ್ಗೆ ಇರುವ ದ್ವೇಷವಾಗಿದೆ. ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್‌ ಕೂಡ ಮಾಡಿದ್ದಾರೆ. ಕುಕ್ಕರ್‌ ಬಾಂಬ್‌ ತಂದವನನ್ನು ಬ್ರದರ್ಸ್‌ ಎಂದು ಹೇಳುತ್ತಾರೆ. ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಅಲ್ಲೇ ಮರಳಿ ಧ್ವಜ ಹಾರಿಸಬೇಕು ಎಂದು ಆಗ್ರಹಿಸಿದರು.

Previous Post
ಭಾರತ ದೇಶದ ಧ್ವಜ ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಸಂವಿಧಾನ ವಿರೋಧಿಗಳಿಗೆ-ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರಿಗೆ ತಕ್ಕ ಪಾಠ ಕಲಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

Recent News