ಲೋಕಸಭಾ ಚುನಾವಣೆಗೆ ‘ಹಿಂದುಳಿದ ಜಾತಿಗಳ ಅಸ್ತ್ರ’!

ಲೋಕಸಭಾ ಚುನಾವಣೆಗೆ ‘ಹಿಂದುಳಿದ ಜಾತಿಗಳ ಅಸ್ತ್ರ’!

ಮುಂಬರುವ ಲೋಕಸಭೆ ಚುನಾವಣೆಯ ಘೋಷಣೆ ಹಿನ್ನೆಲೆಯಲ್ಲಿ ಮತ ಬ್ಯಾಂಕ್‌ಗಳನ್ನು ಓಲೈಸುವ ಕಸರತ್ತು ಶುರುವಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೂಡಿರುವ ‘ಜಾತಿ ಜನಗಣತಿ’ ಅಸ್ತ್ರಕ್ಕೆ ಬಿಜೆಪಿ ಪರ್ಯಾಯ ಕಾರ್ಯತಂತ್ರಗಳನ್ನು ಹುಡುಕುತ್ತಿದೆ.

ರಾಹುಲ್ ಗಾಂಧಿಯವರು ಮಾತ್ರವಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್ ಮತ್ತಿತರ ನಾಯಕರು ‘ಮೀಸಲಾತಿ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಅವುಗಳ ಪ್ರಾತಿನಿಧ್ಯಕ್ಕೆ ತಕ್ಕಷ್ಟು ಅವಕಾಶ ಸಿಗುತ್ತಿಲ್ಲ. ಅದಕ್ಕಾಗಿ ಮೀಸಲಾತಿ ಮರುವಿಂಗಡಣೆ ಅಗತ್ಯ.‌ ಮೀಸಲಾತಿ ಮರುವಿಂಗಡಣೆ ಮಾಡಲು ಜಾತಿ ಜನಗಣತಿ ನಡೆಸುವುದು ಅನಿವಾರ್ಯ’ ಎನ್ನುವ ಕೂಗು ಎಬ್ಬಿಸುತ್ತಿದ್ದಾರೆ. ಪ್ರತಿ ಪಕ್ಷಗಳ ಪಾಳೆಯದಿಂದ ಬರುತ್ತಿರುವ ಜಾತಿಗಣತಿ ಎಂಬ ಪಾಶುಪತಾಸ್ತ್ರ ತಡೆಯಲು ಬಿಜೆಪಿ ಈಗ ಏನನ್ನಾದರೂ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಇದೇ ಹಿನ್ನೆಲೆಯಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ನೀಡಲು ಬಿಜೆಪಿ ಸರ್ಕಾರ ಶಿಫಾರಸು ಮಾಡಿದೆ. ಕರ್ಪೂರಿ ಠಾಕೂರ್, ಸಮಾಜವಾದಿ ಸಿದ್ಧಾಂತದ ನಿಷ್ಠಾವಂತ ಮತ್ತು ಸಾಮಾಜಿಕ ನ್ಯಾಯದ ಚಾಂಪಿಯನ್. ಬಿಹಾರದ ಮುಖ್ಯಮಂತ್ರಿಯಾಗಿ ಮತ್ತು ವಿವಿಧ ಇಲಾಖೆಗಳಲ್ಲಿ ಸಚಿವರಾಗಿದ್ದ ಕರ್ಪೂರಿ ಠಾಕೂರ್ ಅವರ ಅಧಿಕಾರಾವಧಿಯು ಪ್ರಭಾವಶಾಲಿ ಸಾಮಾಜಿಕ ನ್ಯಾಯ ಸುಧಾರಣೆಗಳಿಂದ ಗುರುತಿಸಲ್ಪಟ್ಟಿದೆ. ಗಮನಾರ್ಹ ಉಪಕ್ರಮಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶುಲ್ಕವನ್ನು ರದ್ದುಗೊಳಿಸುವುದು ಮತ್ತು ಬಡತನದ ವಿರುದ್ಧ ಹೋರಾಡುವ ರಾಜ್ಯದಲ್ಲಿ ವ್ಯಾಪಕ ಶೈಕ್ಷಣಿಕ ಪ್ರವೇಶವನ್ನು ಉತ್ತೇಜಿಸುವುದು ಸೇರಿದೆ. ಅವರು ‘ಲಗಾನ್ ಮಾಫ್’ ಅನ್ನು ಜಾರಿಗೆ ತಂದರು, ಲಾಭದಾಯಕವಲ್ಲದ ಜಮೀನುಗಳಿಗೆ ಭೂ ತೆರಿಗೆಯನ್ನು ಮನ್ನಾ ಮಾಡಿದರು. ರೈತರಿಗೆ ಆರ್ಥಿಕ ಪರಿಹಾರವನ್ನು ನೀಡಿದರು. ದಲಿತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ‌ ಕರ್ಪೂರಿ ಠಾಕೂರ್ ಅವರ ಸರ್ಕಾರವು ದಲಿತ ಸಮುದಾಯದ ವ್ಯಕ್ತಿಗಳಿಗೆ ಬಂದೂಕು ಪರವಾನಗಿಗಳನ್ನು ಒದಗಿಸಿತು. ಜಾತಿ ಆಧಾರಿತ ಹಿಂಸಾಚಾರ ಮತ್ತು ದಬ್ಬಾಳಿಕೆಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಈ ನಿರ್ಧಾರವು ಅವರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಮಾತ್ರವಲ್ಲದೆ ಅತ್ಯಂತ ದುರ್ಬಲ ನಾಗರಿಕರ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ತೋರಿಕೊಟ್ಟರು.

ಕರ್ಪೂರಿ ಠಾಕೂರ್ ಅವರ ನೀತಿಗಳಿಂದಾಗಿ 1978ರಲ್ಲಿ ಬಿಹಾರದ ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಸೌಲಭ್ಯ ಲಭಿಸಿತು. ಅವರು ಅತ್ಯಂತ ಹಿಂದುಳಿದ ವರ್ಗಗಳಿಗೆ ನಿರ್ದಿಷ್ಟ ಕೋಟಾಗಳನ್ನು ಖಾತ್ರಿಪಡಿಸುವ ಉಪವಿಭಾಗವನ್ನು ಪರಿಚಯಿಸಿದರು. ಹಿಂದುಳಿದವರ ಪೈಕಿ MBC (ಮೋಸ್ಟ್ ಬ್ಯಾಕ್ ವರ್ಡ್ ಕ್ಲಾಸ್) ಎಂಬ‌ ವರ್ಗ ಸೃಷ್ಠಿಸಿದರು. ಇದನ್ನು ಅತ್ಯಂತ ಹಿಂದುಳಿದ ವರ್ಗಗಳು (EBC ಗಳು) ಎಂದೂ ಕರೆಯಲಾಗುತ್ತದೆ. ಈ ಕ್ರಮವು ರಾಜ್ಯದಲ್ಲಿ ಸಕಾರಾತ್ಮಕ ಕ್ರಿಯೆಯ ಭೂದೃಶ್ಯವನ್ನು ಮರುವ್ಯಾಖ್ಯಾನಿಸಿತು. ಬಳಿಕ ಬಿಹಾರ ಮಾತ್ರವಲ್ಲದೆ ಇತರ ಹಲವು ರಾಜ್ಯಗಳಲ್ಲು ಕೂಡ MBCಗಳು ಪ್ರಮುಖ ಪಾತ್ರವಹಿಸಲಾರಂಭಿಸಿದವು.

ಇಂತಹ ಕರ್ಪೂರಿ ಠಾಕೂರ್ ಅವರನ್ನು ಗೌರವಿಸುವ ಮೂಲಕ ಕೇಂದ್ರ ಸರ್ಕಾರವು ‘ತಮ್ಮದು‌ ಹಿಂದುಳಿದವರ ಪರವಾದ ಸರ್ಕಾರ’ ಎಂ‌ಬ ಸಂದೇಶ ಕೊಡಲು ಮುಂದಾಗಿದೆ. ಮುಖ್ಯವಾಗಿ ಬಿಹಾರದ ಹಿಂದುಳಿದ ವರ್ಗಗಳ ನಾಯಕರಾದ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ಅವರ ‘ಬತ್ತಳಿಕೆ’ಗೆ ಕೈಹಾಕಲು ಮುಂದಾಗಿದೆ. ಇವರೆಲ್ಲರೂ ಸಾಂಪ್ರದಾಯಿಕವಾಗಿ ಪ್ರಾಬಲ್ಯ ಹೊಂದಿರುವ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಈಗ ‘ಕರ್ಪೂರಿ ಠಾಕೂರ್’ ಅಸ್ತ್ರವನ್ನು ಹೂಡುತ್ತಿದೆ.

ಬಿಜೆಪಿ ದಿಢೀರನೆ ‘ಹಿಂದುಳಿದವರ ಪರ’ ಎಂಬ ಪೋಷಾಕು ತೊಟ್ಟುಕೊಳ್ಳಲು ಇನ್ನೂ ಒಂದು ಪ್ರಮುಖ ಕಾರಣವಿದೆ. ಬಿಜೆಪಿಯು ಐತಿಹಾಸಿಕವಾಗಿ ಹಿಂದುತ್ವ ಮತ್ತು ಮೇಲ್ಜಾತಿ ಬನಿಯಾ-ಬ್ರಾಹ್ಮಣ ರಾಜಕೀಯದೊಂದಿಗೆ ಸಂಬಂಧ ಹೊಂದಿರುವ ಪಕ್ಷ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ‘ಸಾಮಾಜಿಕ ನ್ಯಾಯ’ದ ಮಂತ್ರ ಹೇಳಲೇಬೇಕಾಗಿದೆ. ಕರ್ಪೂರಿ ಠಾಕೂರ್ ಅವರನ್ನು ಗುರುತಿಸುವ ಮೂಲಕ ಬಿಜೆಪಿಯು ಅತ್ಯಂತ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಮಾಡುತ್ತಿದೆ.

ಈ ನಡೆಯನ್ನು 2024ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ನಿರೂಪಣೆ ಬದಲಾಯಿಸುವ ಲೆಕ್ಕಾಚಾರ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಪ್ರತಿಪಕ್ಷಗಳು ‘ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಹರಿಕಾರ’ ಎಂದೇ ಖ್ಯಾತರಾಗಿದ್ದ ಕರ್ಪೂರಿ ಠಾಕೂರ್‌ ಅವರಂತಹ ನಾಯಕರನ್ನು ನಿರ್ಲಕ್ಷಿಸಿದ್ದಾರೆ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಲಿದೆ. ಬಿಜೆಪಿ ಈಗ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮೇಲೆ ‘ಸಾಮಾಜಿಕ ನ್ಯಾಯಕ್ಕೆ ತಮ್ಮ ಬದ್ಧತೆಯನ್ನು ಪ್ರತಿಪಾದಿಸಿದ್ದರೂ ಕರ್ಪೂರಿ ಠಾಕೂರ್‌ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಬೇಕೆಂದು ಪ್ರಾದೇಶಿಕ ಪಕ್ಷಗಳು ಹೇಳಲಿಲ್ಲವೇಕೆ? ಕಾಂಗ್ರೆಸ್ ಕೊಡಲಿಲ್ಲವೇಕೆ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕಲಿದೆ. ಹಾಗಾಗಿ ಇದು ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಅನ್ನೇ ನಂಬಿಕೊಂಡಿರುವ ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತಿದೆ.

ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ವಿವಿಧ ಸಮಯಗಳಲ್ಲಿ ಕೇಂದ್ರ ಸರ್ಕಾರದೊಳಗೆ ಪ್ರಭಾವಿ ಸ್ಥಾನಗಳನ್ನು ಹೊಂದಿದ್ದರು ಎಂಬುದು ಗಮನಾರ್ಹ. ಅವರ ರಾಜಕೀಯ ಪ್ರಭಾವವನ್ನು ಗಮನಿಸಿದರೆ ಅವರು ಯಾವತ್ತೋ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವಂತೆ ಒತ್ತಡ ಹೇರಬಹುದಿತ್ತು ಎಂದು ವಾದಿಸಬಹುದು. ಆದರೆ ಅವರು ಎಂದಿಗೂ ಅಂತಹ ಪ್ರಯತ್ನವನ್ನು ಮಾಡಲಿಲ್ಲ. ಈಗ ಹಿಂದುಳಿದ ಮೋದ್ ಘಾಂಚಿ ಜಾತಿಯ ನಾಯಕರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದುಳಿದ ವರ್ಗಗಳ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿರುವುದರಿಂದ ಸಹಜವಾಗಿಯೇ ಬಿಜೆಪಿಗೆ ಲಾಭವಾಗಬಹುದು ಎನ್ನಲಾಗುತ್ತಿದೆ.

ನಿಯತ್ತಿಲ್ಲದ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ನಿಯತ್ತು ಎನ್ನುವ ಪದದ ಅರ್ಥವೇ ಗೊತ್ತಿಲ್ಲ. 2017ರಲ್ಲಿ ನಿತೀಶ್ ಇದ್ದಕ್ಕಿದ್ದಂತೆ ರಾಜೀನಾಮೆ ನೀಡುವ ನಿರ್ಧಾರವನ್ನು ಘೋಷಿಸಿದಾಗ ಅವರ ಮಿತ್ರಪಕ್ಷ ಆರ್ ಜೆಡಿ ಕತ್ತಲೆಯಲ್ಲಿತ್ತು. ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದಾಗ ಕೇಸರಿ ಪಕ್ಷದ ನಾಯಕರಿಗೂ ಯಾವುದೇ ಸುಳಿವು ಇರಲಿಲ್ಲ.‌ ಈಗ ಮತ್ತೆ ಮಹಾಘಟಬಂಧನ್ ಮುರಿದುಕೊಂಡು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ ನಿತೀಶ್. ಈಗಲೂ ಬಹಳ ಹಿಂದಿನಿಂದಲೂ ನಿತೀಶ್ ಕುಮಾರ್ ಅವರ ಸ್ನೇಹಿತ ಮತ್ತು ವೈರಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರಿಗೆ ನಿತೀಶ್ ಹೊಸ ನಡೆಯ ಬಗ್ಗೆ ತಿಳಿದಿರಲಿಲ್ಲ. ನಿತೀಶ್ ಕುಮಾರ್ ಗೆ ಅಧಿಕಾರ ಮಾತ್ರ ಮುಖ್ಯ. ಸೈದ್ಧಾಂತಿಕ ಒಲವುಗಳ ಬಗ್ಗೆ ಅವರಿಗೆ ಯಾವುದೇ ಉತ್ತರದಾಯಿತ್ವವಿಲ್ಲ.

ಪಕ್ಷಗಳನ್ನು ಬದಲಾಯಿಸುವುದಲ್ಲಿ ನಿತೀಶ್ ಕುಮಾರ್ ದಾಖಲೆಯನ್ನು ಯಾರೂ ಸರಿಗಟ್ಟಲಾರರು. ಹೀಗೆ ಒಂದು ಪಕ್ಷಕ್ಕೆ ದ್ರೋಹ ಬಗೆದು, ಇನ್ನೊಂದು ಪಕ್ಷವನ್ನು ಬಿಗಿದಪ್ಪಿಕೊಂಡು 9 ಬಾರಿ ಬಿಹಾರವೆಂಬ ಬೀಮಾರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಭಾರತೀಯ ರಾಜಕೀಯದ ಇತಿಹಾಸದಲ್ಲಿ ‘ಪಲ್ಟು ರಾಮ್’ ಎಂದೇ ಕುಖ್ಯಾತರಾಗಿದ್ದಾರೆ. ಕರ್ಪೂರಿ ಠಾಕೂರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರಂತೆ ನಿತೀಶ್ ಕುಮಾರ್ ಪ್ರಬಲ ಹಿಂದುಳಿದ ವರ್ಗದ ನಾಯಕ ಅಲ್ಲ. ಹಿಂದುಳಿದ ವರ್ಗಗಳಿಗೆ ಹೇಳಿಕೊಳ್ಳುವಂತದ್ದನ್ನೂ ಮಾಡಿಲ್ಲ. ಆದರೂ ಹಿಂದುಳಿದ ವರ್ಗಗಳ ನಾಯಕ ಎಂದು ‘ರಾಜಕೀಯ ಬೇಳೆ’ ಬೇಯಿಸಿಕೊಳ್ಳುತ್ತಾರೆ. ನಿತೀಶ್ ಕುಮಾರ್ ಈವರೆಗೆ 9 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈಗಲೂ ಬಿಹಾರ ಬೀಮಾರು ರಾಜ್ಯವೇ. ಆದರೂ ನಿತೀಶ್ ಕುಮಾರ್ ತಾವು ‘ಸುಹಾಸನ್ ಬಾಬು’ ಎಂಬ ಪೋಸು ನೀಡುತ್ತಾರೆ.

ಬಿಹಾರದ ಸಂಕೀರ್ಣ ರಾಜಕೀಯದಲ್ಲಿ ನಿತೀಶ್ ಅತ್ಯಂತ ಅನಿವಾರ್ಯ ರಾಜಕೀಯ ವ್ಯಕ್ತಿಯಾಗಿ ಉಳಿದಿದ್ದಾರೆ. ತಮ್ಮ ನಿರ್ಣಾಯಕ ಹಿಡಿತವನ್ನು ರಾಜ್ಯದ ರಾಜಕೀಯ ಸ್ಥಿತಿಯನ್ನು ನಿಯಂತ್ರಿಸಲು ‘ಪಕ್ಷಾಂತರವನ್ನೇ’ ತಂತ್ರವನ್ನಾಗಿ ಬಳಸಿಕೊಂಡಿದ್ದಾರೆ. ನಿತೀಶ್ ಯಾವುದೇ ಮೈತ್ರಿ ಪಾಲುದಾರರಿಗೆ ಸ್ನೇಹಿತರೂ ಹೌದು, ಶತ್ರುವೂ ಹೌದು. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು‌ ಊಹಿಸುವುದು ಕಷ್ಟ. ಈಗಲೂ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ, ಎಡ ಮತ್ತು ಕಾಂಗ್ರೆಸ್ 120+ ಶಾಸಕರಿದ್ದರೂ 43 ಸ್ಥಾನವಿದ್ದ ಜೆಡಿಯುಗೆ ಅಧಿಕಾರ ನೀಡಲಾಗಿತ್ತು. ಆದರೆ ನಿಯತ್ತಿಲ್ಲದ ನಿತೀಶ್ ಕುಮಾರ್ ಮಹಾಘಟಬಂಧನ್ ಗೆ ಕೈಕೊಟ್ಟು ಎನ್ ಡಿಎ ಜತೆ ಸೇರಿ‌ ಸರ್ಕಾರ ರಚಿಸಿದ್ದಾರೆ.

Previous Post
ರಾಜ್ಯದ 219 ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆ
Next Post
ಪಕ್ಷಕ್ಕೆ ದುಡಿದ ಎಲ್ಲರಿಗೂ ಅವಕಾಶ; ಇದು ಹೈಕಮಾಂಡ್ ಸೂತ್ರ: ಡಿಸಿಎಂ ಡಿ.ಕೆ.ಶಿವಕುಮಾರ್

Recent News