ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ: ರಾಜಕೀಯ ತಂತ್ರಗಾರಿಕೆ ಇನ್ನೂ ಮಾತ್ರ ನಿಗೂಢ!

ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ: ರಾಜಕೀಯ
ತಂತ್ರಗಾರಿಕೆ ಇನ್ನೂ ಮಾತ್ರ ನಿಗೂಢ!

ಬೆಂಗಳೂರು, ಜನವರಿ 15: ರಾಜಕೀಯ ಲೆಕ್ಕಾಚಾರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಯಾರು? ಯಾವಾಗ? ಯಾರ ಮಿತ್ರರಾಗುತ್ತಾರೋ? ಮತ್ಯಾರ ಶತ್ರುವಾಗುತ್ತಾರೋ? ಒಂದು ಗೊತ್ತಾಗುವುದಿಲ್ಲ. ಆದರೆ ಎಲ್ಲರ ಉದ್ದೇಶಗಳು ಒಂದೇ ಅದು ಅಧಿಕಾರದಲ್ಲಿರುವುದು ಅಥವಾ ಅಧಿಕಾರ ಪಡೆಯುವುದಾಗಿದೆ. ಸದ್ಯಕ್ಕೆ ಮುಂಬರುವ ಲೋಕಸಭಾ ಚುನಾವಣೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇಲ್ಲಿ ರಾಜಕಾರಣಿಗಳ ಗಿಮಿಕ್ ಗಳು, ಜಾತಿ,ಧರ್ಮದ ಪ್ಲೇ ಕಾರ್ಡ್ ಗಳು ಕೆಲಸ ಮಾಡುತ್ತೋ? ಅಥವಾ ಮತದಾರರ ಪ್ರಬುದ್ಧತೆ ಗೆಲ್ಲುತ್ತದೆಯೋ? ಗೊತ್ತಿಲ್ಲ.

2024ರ ಲೋಕಸಭಾ ಚುನಾವಣೆಯಲ್ಲಿ ದೇಶ ಮಾತ್ರವಲ್ಲ ವಿದೇಶಗಳಲ್ಲಿನ ನಾಯಕರು ಮತ್ತು ಅಲ್ಲಿರುವ ಭಾರತೀಯರು ಕಾತರತೆಯಿಂದ ಕಾಯುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಎನ್ ಡಿಎ ಮತ್ತು ಐಎನ್ ಡಿಐಎ (ಇಂಡಿಯಾ)ಗೆ ಅಗ್ನಿಪರೀಕ್ಷೆಯಾಗಲಿದೆ. ಮೂರನೇ ಬಾರಿಗೆ ನರೇಂದ್ರಮೋದಿ ಪ್ರಧಾನಿಯಾಗಿ ದಾಖಲೆ ನಿರ್ಮಿಸುತ್ತಾರಾ? ಎಂಬ ಕುತೂಹಲಗಳು ಎಲ್ಲರಲ್ಲೂ ಇದೆ. ಆದರೆ ಮೂರನೇ ಬಾರಿಗೆ ಎನ್ ಡಿಎಗೆ ಅಧಿಕಾರ ಹಿಡಿಯಲು ಬಿಡಬಾರದು ಎಂಬ ಹಠಕ್ಕೆ ಇಂಡಿಯಾ ಒಕ್ಕೂಟ ಬಿದ್ದಿದೆ. ಎನ್ ಡಿಎ ಮತ್ತು ಐಎನ್ ಡಿಐಎ ಎಂಬ ಎರಡು ಶಕ್ತಿಗಳಾಗಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಹೋಗುತ್ತಿವೆ. ಒಂದು ಶಕ್ತಿ ಪ್ರಧಾನಿ ನರೇಂದ್ರಮೋದಿಯನ್ನು ಪ್ರೀತಿಸುವುದಾದರೆ ಮತ್ತೊಂದು ದ್ವೇಷಿಸುವ ಶಕ್ತಿಯಾಗಿದೆ. ಪ್ರೀತಿಸುವವರು ಒಂದು ಗುಂಪಾದರೆ, ದ್ವೇಷಿಸುವವರು ಇನ್ನೊಂದು ಗುಂಪಾಗಿದ್ದಾರೆ. ಹೀಗಾಗಿ ಎರಡು ಪ್ರಬಲ ಶಕ್ತಿಗಳು ಅಖಾಡಕ್ಕಿಳಿದು ಅಬ್ಬರಿಸುವ ದಿನಗಳು ಹತ್ತಿರದಲ್ಲಿಯೇ ಇದೆ. ಒಂದು ವೇಳೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಸ್ಪರ್ಧಿಗಳಾಗಿದ್ದರೆ ಬಹುಶಃ ಇವೆರಡನ್ನು ದ್ವೇಷಿಸುವ ಮೂರನೇ ಶಕ್ತಿಯೊಂದು ಹುಟ್ಟಿಕೊಳ್ಳುತ್ತಿತ್ತೇನೋ?

ಮೋದಿ ಅಲೆಯಲ್ಲಿ ತೇಲಿ ಹೋದ ಕಾಂಗ್ರೆಸ್ 2014ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಭ್ಯರ್ಥಿ ಎಂಬುದು ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಸಂಚಲನವುಂಟಾಗಿತ್ತು. ಮೋದಿ ಅಲೆ ದೇಶದಾದ್ಯಂತ ಆರಂಭವಾಯಿತು. ಆ ಅಲೆಯಲ್ಲಿ ಬಲಿಷ್ಠ ಕಾಂಗ್ರೆಸ್ ತೇಲಿ ಹೋಗಿದ್ದು ಇತಿಹಾಸ. ಆ ನಂತರದ 2019ರಲ್ಲಿಯೂ ಚೇತರಿಸಿಕೊಳ್ಳಲಾರದ ಸ್ಥಿತಿಗೆ ಕಾಂಗ್ರೆಸ್ ಹೋಯಿತು. ಒಂದು ವೇಳೆ ಕಾಂಗ್ರೆಸ್ ಬಿಜೆಪಿಗೆ ತೀವ್ರ ಪೈಪೋಟಿ ನೀಡುವಂತೆ ಬೆಳೆದಿದ್ದರೆ ಇವತ್ತು ಎನ್ ಡಿಎ ಮತ್ತು ಐಎನ್ ಡಿಐಎನ್ನು ವಿರೋಧಿಸುವ ಇನ್ನೊಂದು ಶಕ್ತಿಯ ಸೃಷ್ಟಿಗೆ ಅವಕಾಶ ಇರುತ್ತಿತ್ತೇನೋ? ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ನಡೆದಿರುವ ಚುನಾವಣೆಗಳನ್ನು ಗಮನಿಸಿದರೆ ಒಂದು ಅವಧಿಯಿಂದ ಮತ್ತೊಂದು ಅವಧಿಗೆ ಹತ್ತು ಹಲವು ಬದಲಾವಣೆಗಳಾಗಿವೆ. ಪತ್ರಿಕೆಗಳ ಮೂಲಕವಷ್ಟೆ ಜನರ ಬಳಿಗೆ ತಲುಪುತ್ತಿದ್ದ ಕಾಲಘಟ್ಟಕ್ಕೆ ಹೋಲಿಸಿದರೆ ಇವತ್ತಿನದು ನೂರು ಪಟ್ಟು ವೇಗದಲ್ಲಿದೆ. ಜತೆಗೆ ಮತದಾರರು ವಿದ್ಯಾವಂತರಾಗಿದ್ದಾರೆ. ವಿಚಾರಗಳನ್ನು ಅರಿಯುವ, ಅಧ್ಯಯನ ಮಾಡುವ, ವಿಶ್ಲೇಷಿಸುವಷ್ಟು ಚತುರತೆಯಿದೆ. ಇದೆಲ್ಲದರ ನಡುವೆ ಡಿಜಿಟಲ್ ಯುಗದಲ್ಲಿ ವಿದ್ಯಮಾನಗಳು ವೇಗವಾಗಿ ಕಟ್ಟಕಡೆಯ ವ್ಯಕ್ತಿಯನ್ನು ತಲುಪುತ್ತಿವೆ. ಹಾಗಾಗಿ ಹಿಂದಿನಂತೆ ಪೊಳ್ಳು ಆಶ್ವಾಸನೆ, ಚೀಪ್ ಗಿಮಿಕ್ ಮಾಡಿ ಮತದಾರರನ್ನು ಯಾಮಾರಿಸುವುದು ರಾಜಕೀಯ ನಾಯಕರಿಗೆ ಕಷ್ಟವಾಗಿದೆ.

ರಾಜಕೀಯಲ್ಲಿ ಜಾತಿ, ಧರ್ಮದ ಬೇಳೆ ಬೇಯುತ್ತಿದೆ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಮೊದಲಿನಂತೆ ರಾಜಕೀಯ ನಾಯಕರು ಹೇಳಿದ್ದೇ ವೇದ ವಾಕ್ಯವೆಂದು ನಂಬುವ ಕಾಲ ಹೋಗಿದೆ. ಜತೆಗೆ ಅಭಿವೃದ್ಧಿಗೆ ಒತ್ತು ನೀಡುವ ಜನ ಸಮೂಹ ಇಲ್ಲಿದ್ದರೂ ಎಲ್ಲೊಂದು ಕಡೆ ಧರ್ಮ ಜಾತಿ ವಿಚಾರ ಬಂದಾಗ ಭಾವನಾತ್ಮಕವಾಗಿ ಬದಲಾಗುವವರು ಇಲ್ಲದಿಲ್ಲ. ಹೀಗಾಗಿಯೇ ಇವತ್ತಿಗೂ ಧರ್ಮ ಮತ್ತು ಜಾತಿಯ ಪ್ಲೇಕಾರ್ಡ್ ಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅದನ್ನು ಬಿಟ್ಟು ನಮ್ಮ ನಾಯಕರಿಗೆ ರಾಜಕೀಯ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿಯೇ ಆಗ್ಗಾಗ್ಗೆ ಧರ್ಮ ಮತ್ತು ಜಾತಿಯ ಕಿಡಿ ಹೊತ್ತಿಸುತ್ತಲೇ ಅದರಿಂದ ರಾಜಕೀಯ ಬೇಳೆ ಬೇಯಿಸುತ್ತಲೇ ಬರುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಎರಡು ಪ್ರಬಲ ಶಕ್ತಿಯಾಗಿರುವ ಎನ್ ಡಿಎ ಮತ್ತು ಐಎನ್ ಡಿಐಎ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ ಎನ್ನುವುದು ಈಗಿನಿಂದಲೇ ಗೊತ್ತಾಗುತ್ತಿದೆ. ನಾವು ಜಾತ್ಯಾತೀತರು ಎಂದು ಡಂಗೂರ ಸಾರುತ್ತಿರುವವರೆಲ್ಲರೂ ಹಾಕಿರುವುದು ಬರೀ ಮುಖವಾಡವಾಗಿದ್ದು ಅದನ್ನು ಕಳಚಿ ಚುನಾವಣೆಗೆ ಹೋಗುವುದು ಯಾವುದೇ ರಾಜಕೀಯ ಪಕ್ಷದ ನಾಯಕನಿಗೂ ಸಾಧ್ಯವಿಲ್ಲ ಎಂಬುದು ಇದರಿಂದ ಗೊತ್ತಾಗುತ್ತಿದೆ. ಎಲ್ಲರೂ ಅವರವರಿಗೆ ಅವರವರ ಅನುಕೂಲಕ್ಕೆ ತಕ್ಕಂತೆ ಜಾತಿ, ಧರ್ಮವನ್ನು ಬಳಸಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಮುಂದಿದೆ ದೊಡ್ಡ ಸವಾಲ್ ಈ ಬಾರಿಯ ಲೋಕಸಭಾ ಚುನಾವಣೆಗೆ ಸೃಷ್ಟಿಯಾಗಿರುವ ಐಎನ್ ಡಿಐಎ ಒಕ್ಕೂಟದ ನೇತೃತ್ವ ಕಾಂಗ್ರೆಸ್ ವಹಿಸಿದ್ದು, ಅದರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ನೇಮಕವಾಗಿದ್ದಾರೆ. ಆದರೆ ಅವರೇ ಪ್ರಧಾನಿ ಅಭ್ಯರ್ಥಿಯಾ? ಅದನ್ನು ಎಲ್ಲೂ ಹೇಳಿಲ್ಲ. ಮೇಲ್ನೋಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇನ್ನು ಒಕ್ಕೂಟದ ಸದಸ್ಯ ಪಕ್ಷಗಳು ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದಂತೆ ಕಂಡು ಬಂದರೂ ಕ್ಷೇತ್ರ ಹಂಚಿಕೆಯಾಗುವ ತನಕ ಏನನ್ನೂ ಹೇಳುವಂತಿಲ್ಲ. ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮೊಂದಿಗೆ ಇರುವ ಸಹಪಕ್ಷಗಳ ನಾಯಕರನ್ನು ಒಟ್ಟಿಗೆ ಚುನಾವಣೆಗೆ ಎಳೆದುಕೊಂಡು ಹೋಗುವುದು ಸುಲಭವಾಗಿ ಉಳಿದಿಲ್ಲ. ಅದೊಂದು ಸವಾಲ್ ಎಂದರೂ ತಪ್ಪಾಗಲಾರದು. ಆದರೆ ತಮ್ಮೊಳಗಿನ ಪ್ರತಿಷ್ಟೆ, ಅಧಿಕಾರ ದಾಹ ಎಲ್ಲವನ್ನು ಬಿಟ್ಟು ಪ್ರಾದೇಶಿಕ ಪಕ್ಷಗಳು ಹೇಗೆ ಸಹಕರಿಸುತ್ತವೆ ಎನ್ನುವುದು ಕೂಡ ಕುತೂಹಕಕಾರಿಯಾಗಿದೆ. ಒಂದು ವೇಳೆ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ಎಲ್ಲ ಪಕ್ಷಗಳ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಲ್ಲಿ ಖರ್ಗೆ ಅವರು ಯಶಸ್ವಿಯಾದರೆ ಚುನಾವಣೆಯಲ್ಲಿ ಅರ್ಧ ಗೆದ್ದಂತೆ.

ರಾಜಕೀಯ ತಂತ್ರಗಳು ಕೂಡ ಬದಲಾಗಲಿವೆ ಲೋಕಸಭಾ ಚುನಾವಣೆಗೆ ಇನ್ನು ಕೇವಲ ನಾಲ್ಕೈದು ತಿಂಗಳಷ್ಟೇ ಬಾಕಿಯಿರುವುದರಿಂದ ಎಲ್ಲವನ್ನೂ ಈಗಲೇ ಹೇಳುವುದು ಮೂರ್ಖತನವಾಗುತ್ತದೆ. ಪ್ರತಿಯೊಂದು ಪಕ್ಷ ಮತ್ತು ನಾಯಕರು ತಮ್ಮದೇ ಆದ ಕಾರ್ಯತಂತ್ರವನ್ನು ಅರಿತವರಾಗಿರುವುದರಿಂದ ಅದನ್ನು ಹೇಗೆ ಮತ್ತು ಎಲ್ಲಿ ಬಳಸಬೇಕೆಂಬುದು ಗೊತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಮತ್ತು ನಾಯಕರ ತಂತ್ರಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಲಿದೆ. ಎಲ್ಲವೂ ಪಕ್ಕ ತಿಳಿಯಬೇಕಾದರೆ ಚುನಾವಣಾ ದಿನಾಂಕ ಘೋಷಣೆಯಾಗಬೇಕಾಗಿದೆ.

Previous Post
‘ನಮ್ಮ ಮೆಟ್ರೋ’ ಸಿಹಿ ಸುದ್ದಿ: ಪಂದ್ಯಾವಳಿ ದಿನ ರೈಲು ಸೇವೆ ವಿಸ್ತರಣೆ, ದಿನಾಂಕ, ಸಮಯದ ಮಾಹಿತಿ
Next Post
ಯುಎಸ್ ಅಧ್ಯಕ್ಷೀಯ ರೇಸ್‌ನಿಂದ ವಿವೇಕ್ ರಾಮಸ್ವಾಮಿ ಔಟ್

Recent News