ವಿಧಾನಸೌಧದಕ್ಕೆ ಬೀಗ ಹಾಕಲು ಮುಂದಾದ ಬಿಜೆಪಿ ನಾಯಕರು: ವಿಜಯೇಂದ್ರ ವಶಕ್ಕೆ ಪಡೆದ ಪೊಲೀಸರು

ವಿಧಾನಸೌಧದಕ್ಕೆ ಬೀಗ ಹಾಕಲು ಮುಂದಾದ ಬಿಜೆಪಿ ನಾಯಕರು: ವಿಜಯೇಂದ್ರ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಫೆಬ್ರವರಿ 07: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಎಲ್ಲಾ ಸಚಿವರು, ಶಾಸಕರು ದೆಹಲಿಗೆ ಮಜಾ ಮಾಡಲು ತೆರಳಿದ್ದಾರೆ. ವಿಧಾನಸೌಧದ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಕ್ಕೆ‌ ಬೀಗ ಹಾಕುತ್ತೇವೆ ಎಂದು ಮುಂದಾದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೆರಿಗೆ ಕಡಿತ ಹಾಗೂ ಅನುದಾನ ತಾರತಮ್ಯ ವಿರೋಧಿಸಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ‌ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಬಳಿಕ ವಿಧಾನಸೌಧಕ್ಕೆ ಬೀಗ ಹಾಕಲು ಮುಂದಾದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೀಗ ಹಿಡಿದುಕೊಂಡು ವಿಧಾನಸೌಧದ ಬಾಗಿಲನ್ನು ಬಂದ್ ಮಾಡಲು ಹೊರಟರು. ಈ ವೇಳೆ ಅವರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆಯಿತು. ವಿಧಾನಸೌಧದಲ್ಲಿ ಇರಬೇಕಾದ ಸರ್ಕಾರ ದೆಹಲಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಬೀಗ ಜಡಿಯಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಬಿ ವೈ ವಿಜಯೇಂದ್ರ ಮಾತನಾಡಿ,ದೆಹಲಿ ಚಲೋ ಮಾಡಿದ ಕಾಂಗ್ರೆಸ್ಸಿಗರಿಗೆ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರಕಾರವು ಬರಗಾಲದ ಸಂದರ್ಭದಲ್ಲೂ ಸಮರ್ಪಕವಾಗಿ ವಿದ್ಯುತ್ ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರವು ಸರಿಯಾಗಿ ವಿದ್ಯುತ್ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಕಾಂಗ್ರೆಸ್ ಸರಕಾರವು ಬರಗಾಲ ಸಂಬಂಧಿತ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಸರಕಾರವು ತನ್ನ ಖಜಾನೆಯನ್ನು ಖಾಲಿ ಮಾಡಿಕೊಂಡಿದೆ. ದೆಹಲಿ ಚಲೋ ಮೂಲಕ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಅಸಮರ್ಥ ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲೂ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಯುಕೆಪಿ ಬಗ್ಗೆ ಮಾತನಾಡಿದರೂ ಅನುದಾನ ಕೊಟ್ಟಿಲ್ಲ. ಬಿಜೆಪಿ ಸರಕಾರ ಇದ್ದಾಗ ಕಾಂಗ್ರೆಸ್ಸಿಗರು ಮೇಕೆದಾಟು ಹೋರಾಟ ಮಾಡಿದ್ದರು. ದೆಹಲಿ ಚಲೋ ನಾಟಕವು ರಾಜ್ಯದ ಮತದಾರರ ಕಣ್ಣಿಗೆ ಮಣ್ಣೆರಚುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು. ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು. ರಾಜ್ಯದ ಕಾಂಗ್ರೆಸ್ ಸರಕಾರವು ಬಡವರ ವಿರೋಧಿ, ದಲಿತರ ವಿರೋಧಿ ಮಾತ್ರವಲ್ಲದೆ ರೈತವಿರೋಧಿಯಾಗಿದೆ ಎಂದು ತಿಳಿಸಿದರು. ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್‍ನಿಂದ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಒಳಿತುಗಳೇ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿಯವರು, ಕಾಂಗ್ರೆಸ್ ಕಾಲದಲ್ಲಿ 85 ಕಿಮೀ ರೈಲ್ವೆ ಮಾರ್ಗ ವಿದ್ಯುದೀಕರಣ ಆಗಿತ್ತು. ನಮ್ಮ ಕಾಲದಲ್ಲಿ 3,500 ಕಿಮೀ ರೈಲ್ವೆ ಇಲೆಕ್ಟ್ರಿಫಿಕೇಶನ್ ಆಗಿದೆ. 85 ಕಿಮೀ ಮಾಡಿದವರು ಅನ್ಯಾಯ ಮಾಡಿದ್ದಾರಾ? 3,500 ಕಿಮೀ ಮಾಡಿದ ಮೋದಿಯವರು ಅನ್ಯಾಯ ಮಾಡಿದ್ದಾರಾ? ಎಂದು ಕೇಳಿದರು. ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ಸಿನಿಂದ ಅನ್ಯಾಯ ಆಗಿದೆ ಎಂದು ಟೀಕಿಸಿದರು.

Previous Post
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಿರಿಯ ನಾಯಕರ ಮೇಲೆ ಕಾಂಗ್ರೆಸ್ ಒತ್ತಡ!
Next Post
ರೈತರಿಗೆ ಆತ್ಮಹತ್ಯೆ ಭಾಗ್ಯ, ಶಾಸಕರಿಗೆ ನಾಳೆ ಬಾ ಫಲಕ: ಆರ್‌ ಅಶೋಕ್‌ ವಾಗ್ದಾಳಿ

Recent News