ವಿವಿಧ ಬೇಡಿಕೆಗಳ ಅಂಗೀಕಾರಕ್ಕಾಗಿ ದೆಹಲಿ ಚಲೋಗೆ ಕರೆ ಇಂದು ದೆಹಲಿಯ ಗಡಿಗಳಲ್ಲಿ ಅನ್ನದಾತರ ಪ್ರತಿಭಟನೆ

ವಿವಿಧ ಬೇಡಿಕೆಗಳ ಅಂಗೀಕಾರಕ್ಕಾಗಿ ದೆಹಲಿ ಚಲೋಗೆ ಕರೆ ಇಂದು ದೆಹಲಿಯ ಗಡಿಗಳಲ್ಲಿ ಅನ್ನದಾತರ ಪ್ರತಿಭಟನೆ

ನವದೆಹಲಿ : ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು, ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲಮನ್ನಾ ಮತ್ತು ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆರಲು ದೇಶದ ರೈತರು ನಾಳೆ ದೆಹಲಿಯತ್ತ ರ‍್ಯಾಲಿ ನಡೆಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ದೆಹಲಿ ಚಲೋಗೆ ಕರೆ ನೀಡಿವೆ.

ಈ ರ‍್ಯಾಲಿಗೆ ಮುನ್ನೆಚ್ಚರಿಕೆಯಾಗಿ ಸರ್ಕಾರ ಹಲವು ತಡೆಗಳನ್ನು ಒಡ್ಡುತ್ತಿದೆ. ರೈತರು ದೆಹಲಿ ತಲುಪದಂತೆ ತಡೆಯಲು ದೆಹಲಿ, ಪಂಜಾಬ್ ಮತ್ತು ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ. ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗಳು ಮತ್ತು ಮುಳ್ಳುತಂತಿಗಳನ್ನು ಹಾಕುವ ಮೂಲಕ ವಾಹನಗಳ ಪ್ರವೇಶವನ್ನು ತಡೆಯುತ್ತಿವೆ. ನಿಷೇಧಾಜ್ಞೆಗಳನ್ನು ಹೇರಿ, ಸಾವಿರಾರು ಪೊಲೀಸರನ್ನು ನಿಯೋಜಿಸಿ ಗಡಿಯನ್ನು ಭದ್ರಪಡಿಸಲಾಗಿದೆ. ಹರಿಯಾಣ ಸರ್ಕಾರವು ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸಭೆ ಸೇರುವುದನ್ನು ನಿಷೇಧಿಸಿದೆ.

ಪಂಜಾಬ್‌ನೊಂದಿಗಿನ ರಾಜ್ಯದ ಗಡಿಯನ್ನು ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗೋಡೆಗಳು ಮತ್ತು ಮುಳ್ಳುತಂತಿಗಳಿಂದ ಮುಚ್ಚಿದ್ದಾರೆ. ಅಂಬಾಲಾದ ಸೆಕ್ಟರ್ 10 ರಲ್ಲಿನ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂ ಅನ್ನು ತಾತ್ಕಾಲಿಕ ಬಂಧನ ಕೇಂದ್ರವೆಂದು ಘೋಷಿಸಲಾಗಿದೆ ಎಂದು ಅಂಬಾಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಪೊಲೀಸ್‌ ಕಮಿಷನರ್‌ ಸಂಜಯ್‌ ಅರೋರಾ ಅವರು, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗಿನ ನಗರದ ಗಡಿ ಪ್ರದೇಶಗಳಿಗೆ ಭಾನುವಾರವೇ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಈಗಾಗಲೇ ಬಿಡುಗಡೆ ಮಾಡಲಾಗಿರುವ ಸಂಚಾರ ಮಾರ್ಗಸೂಚಿ ಪ್ರಕಾರ, ಸಿಂಘು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರದ ಮೇಲೆ ಸೋಮವಾರದಿಂದಲೇ ನಿರ್ಬಂಧ ಹೇರಲಾಗಿದೆ. ಸುಮಾರು 5,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಸ್ತೆ ಬಂದ್‌ ಮಾಡುವುದಕ್ಕೆ ದೊಡ್ಡದೊಡ್ಡ ಕಂಟೇನರ್‌ಗಳನ್ನು ಮತ್ತು ಕಾಂಕ್ರಿಟ್‌ ತಡೆಗೋಡೆಗಳನ್ನು ಕ್ರೇನ್‌ಗಳ ಮೂಲಕ ಸಾಗಿಸಲಾಗುತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Previous Post
ಬಹುಮತ ಸಾಬೀತುಪಡಿಸಿದ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಎನ್‌ಡಿಎ ಆಡಳಿತ
Next Post
ತಮಿಳುನಾಡಿಗೆ ಕಾವೇರಿ ನೀರಿ ಹರಿಸಲು CWRC ಶಿಫಾರಸ್ಸು

Recent News