ವಿಶ್ವಾಸಮತ ಯಾಚನೆ: ಹೇಮಂತ್ ಸೊರೇನ್ ಭಾಗಿಯಾಗಲು ಕೋರ್ಟ್ ಅನುಮತಿ

ವಿಶ್ವಾಸಮತ ಯಾಚನೆ: ಹೇಮಂತ್ ಸೊರೇನ್ ಭಾಗಿಯಾಗಲು ಕೋರ್ಟ್ ಅನುಮತಿ

ರಾಂಚಿ, ಫೆ. 3: ಜಾರ್ಖಂಡ್ ರಾಜ್ಯದ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಮಹಾಘಟಬಂಧನ್ (ಮಹಾ ಮೈತ್ರಿ) ಫೆಬ್ರವರಿ 5 ರಂದು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ. ಇದೇ ವೇಳೆ ಇಡಿ ಬಂಧನದಲ್ಲಿರುವ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್‌ಗೆ ಫೆಬ್ರವರಿ 5 ರಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸಲು ರಾಂಚಿಯ ವಿಶೇಷ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಸೊರೇನ್ ಅವರು ಹೊಸ ಸರ್ಕಾರ ಕೋರಿರುವ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ಕೋರಿ ವಿಶೇಷ ಪಿಎಂಎಲ್ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಮಾತನಾಡಿದ ಜಾರ್ಖಂಡ್‌ನ ಕಾಂಗ್ರೆಸ್ ಉಸ್ತುವಾರಿ ಮೀರ್, ವಿಶ್ವಾಸ ಮತ ಪರೀಕ್ಷೆ ಮುಗಿಯುವವರೆಗೆ ನಮ್ಮ ಶಾಸಕರು ‘ಸುರಕ್ಷಿತ ಸ್ಥಳದಲ್ಲಿ’ ಬಿಡಾರ ಹೂಡುತ್ತಾರೆ ಎಂದು ಹೇಳಿದ್ದರು. ಚಂಪೈ ಸೊರೇನ್ ಪ್ರಮಾಣ ವಚನ ಸ್ವೀಕಾರದ ನಂತರ ಹೈದರಾಬಾದ್‌ಗೆ ತೆರಳಿರುವ ಆಡಳಿತಾರೂಢ ಮೈತ್ರಿಕೂಟದ ಹಲವು ಶಾಸಕರು, ಪ್ರಸ್ತುತ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಮುನ್ನ ತೆಲಂಗಾಣ ರಾಜಧಾನಿಯ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

‘ಹಾಲಿ ಮುಖ್ಯಮಂತ್ರಿಯೊಬ್ಬರು ಕೆಳಗಿಳಿದು ಪಕ್ಷದ ಸಹೋದ್ಯೋಗಿಗೆ ಅಧಿಕಾರ ಹಸ್ತಾಂತರಿಸುವುದು ಅನಿರೀಕ್ಷಿತ ಬೆಳವಣಿಗೆ. ಇಡೀ ಮೈತ್ರಿ ಕೂಟವು ಅವಿರೋಧವಾಗಿ ಹೇಮಂತ್ ಸೊರೇನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದೆ. ಔಪಚಾರಿಕವಾಗಿ ಮುಂದಿನ ಮುಖ್ಯಮಂತ್ರಿಯಾಗಿ ಅವರ ಹೆಸರನ್ನು ರಾಜ್ಯಪಾಲರಿಗೆ ಪ್ರಸ್ತಾಪಿಸಿದೆ. ನಿನ್ನೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವಕಾಶ ನೀಡಿದ್ದಕ್ಕಾಗಿ ನಾವು ರಾಜ್ಯಪಾಲರಿಗೆ ಕೃತಜ್ಞರಾಗಿರುತ್ತೇವೆ. ಫೆಬ್ರವರಿ 5 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಮೈತ್ರಿಕೂಟವನ್ನು ಆಹ್ವಾನಿಸಲಾಗುವುದು. ಅಲ್ಲಿಯವರೆಗೆ ನಮ್ಮ ಎಲ್ಲ ಶಾಸಕರು ಸಂರಕ್ಷಿತ ಸ್ಥಳದಲ್ಲಿಯೇ ಇರುತ್ತಾರೆ’ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಅಶಾಂತಿಯ ನಡುವೆ, ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ನಾಯಕ ಚಂಪೈ ಸೊರೇನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸೊರೇನ್ ಜೊತೆಗೆ ಕಾಂಗ್ರೆಸ್‌ನ ಅಲಂಗೀರ್ ಆಲಂ ಮತ್ತು ಆರ್‌ಜೆಡಿಯ ಸತ್ಯಾನಂದ್ ಭೋಕ್ತಾ ಕೂಡ ಜಾರ್ಖಂಡ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 29, ಅದರ ಮಿತ್ರ ಪಕ್ಷ ಕಾಂಗ್ರೆಸ್ 17 ಸ್ಥಾನಗಳನ್ನು ಹೊಂದಿದ್ದರೆ. ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ತಲಾ 1 ಸ್ಥಾನಗಳನ್ನು ಹೊಂದಿವೆ. ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರ ನಿಷ್ಠಾವಂತ ಚಂಪೈ ಸೊರೇನ್ ಮತ್ತು 43 ಶಾಸಕರು ಗುರುವಾರ ರಾಜಭವನದಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು. ರಾಜ್ಯದ ಸಾರಿಗೆ ಸಚಿವರಾಗಿರುವ ಚಂಪೈ ಅವರು ಏಳು ಬಾರಿ ಶಾಸಕರಾಗಿದ್ದಾರೆ ಮತ್ತು ಅವರು ಜಾರ್ಖಂಡ್‌ನ ಸೆರೈಕೆಲ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಜೆಎಂಎಂ ಸೇರುವ ಮುನ್ನ ಸ್ವತಂತ್ರ ಶಾಸಕರಾಗಿದ್ದರು.

ಕಳೆದ ಬುಧವಾರ ಬಂಧಿತರಾಗಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಫೆಬ್ರವರಿ 5 ರಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸಲು ರಾಂಚಿಯ ವಿಶೇಷ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸೊರೇನ್ ಅವರು ಹೊಸ ಸರ್ಕಾರ ಕೋರಿರುವ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ಕೋರಿ ವಿಶೇಷ ಪಿಎಂಎಲ್ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ನ್ಯಾಯಾಲಯ ಅವರನ್ನು ಐದು ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ತಾನು ವಿಧಾನಸಭೆಯ ಸದಸ್ಯರಾಗಿದ್ದು, ವಿಶೇಷ ಅಧಿವೇಶನದಲ್ಲಿ ಭಾಗವಹಿಸುವ ಹಕ್ಕಿದೆ ಎಂದು ಸೊರೇನ್ ನ್ಯಾಯಾಲಯದ ಮುಂದೆ ಮನವಿ ಮಾಡಿದರು.

Previous Post
ಜಾರ್ಖಂಡ್‌ನ ನೂತನ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ
Next Post
ಶಾಸಕರ ಖರೀದಿ ಆರೋಪ: ಕೇಜ್ರಿವಾಲ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

Recent News