ಶಾಸಕರ ಖರೀದಿ ಆರೋಪ: ಕೇಜ್ರಿವಾಲ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

ಶಾಸಕರ ಖರೀದಿ ಆರೋಪ: ಕೇಜ್ರಿವಾಲ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

ನವದೆಹಲಿ, ಫೆ. 3: ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ನೋಟಿಸ್ ನೀಡಲು ರಾಷ್ಟ್ರ ರಾಜಧಾನಿ ಪೊಲೀಸರ ತಂಡ ಇಂದು ಮತ್ತೆ ಅವರ ನಿವಾಸಕ್ಕೆ ತೆರಳಿತ್ತು. ದೆಹಲಿ ಕ್ರೈಂ ಬ್ರಾಂಚ್ ತಂಡಗಳು ನಿನ್ನೆಯೂ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ದೆಹಲಿ ಸಚಿವೆ ಅತಿಶಿ ಅವರ ಮನೆಗಳಿಗೆ ನೋಟಿಸ್ ನೀಡಲು ತೆರಳಿದ್ದವು. ಆದರೆ, ಕೇಜ್ರಿವಾಲ್ ಅವರ ಮನೆಯ ಅಧಿಕಾರಿಗಳು ನೋಟಿಸ್ ಸ್ವೀಕರಿಸಲು ನಿರಾಕರಿಸಿದರು. ಅತಿಶಿ ಅವರು ಮನೆಯಲ್ಲಿ ಇರಲಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ರೈಂ ಬ್ರಾಂಚ್ ಖುದ್ದು ಕೇಜ್ರಿವಾಲ್ ಅವರಿಗೆ ನೋಟಿಸ್ ಹಸ್ತಾಂತರಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಆರೋಪ ಗಂಭೀರವಾಗಿದೆ ಎಂದು ದೆಹಲಿ ಬಿಜೆಪಿ ಘಟಕ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ದೂರು ಸಲ್ಲಿಸಿದೆ. ‘ಕೇಜ್ರಿವಾಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಾವು ಹೇಳಿದ್ದೇವೆ. ಕೇಜ್ರಿವಾಲ್ ಅವರ ಸುಳ್ಳಿನ ಹಿಂದಿನ ಸತ್ಯ ಈಗ ಬಹಿರಂಗಗೊಳ್ಳಲಿದೆ. ಅವರು ಸುಳ್ಳು ಹೇಳಲು ಸಾಧ್ಯವಿಲ್ಲ ಮತ್ತು ತನಿಖೆಯಿಂದ ಓಡಿಹೋಗಲು ಸಾಧ್ಯವಿಲ್ಲ’ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

‘ಬಿಜೆಪಿಯು ಎಎಪಿಯ ಏಳು ಶಾಸಕರಿಗೆ ಪಕ್ಷ ತೊರೆಯಲು ತಲಾ ₹25 ಕೋಟಿ ಹಣದ ಆಮಿಷ ನೀಡಿತು; ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕಿದೆ’ ಎಂದು ಆಪ್ ಆರೋಪಿಸಿದೆ. ‘ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಇಟ್ಟುಕೊಂಡು, ಬಿಜೆಪಿಯು ದೆಹಲಿಯಲ್ಲಿ “ಆಪರೇಷನ್ ಕಮಲ 2.0” ಅನ್ನು ಪ್ರಾರಂಭಿಸಿದೆ’ ಅತಿಶಿ ಸುದ್ದಿಗಾರರಿಗೆ ತಿಳಿಸಿದರು. ‘ಅವರು ಕಳೆದ ವರ್ಷ ಎಎಪಿ ಶಾಸಕರಿಗೆ ಹಣ ನೀಡುವ ಮೂಲಕ ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದರು; ಆದರೆ ವಿಫಲರಾದರು’ ಎಂದು ಅತಿಶಿ ಹೇಳಿದ್ದಾರೆ.

ಜನವರಿ 30 ರಂದು ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ಸಚ್‌ದೇವ, ‘ಕೇಜ್ರಿವಾಲ್ ತಮ್ಮ ಆರೋಪಗಳನ್ನು ಸಾಬೀತುಪಡಿಸಬೇಕು’ ಎಂದು ಒತ್ತಾಯಿಸಿದರು. ಇಲ್ಲಿಯವರೆಗೆ ಎಎಪಿಯಿಂದ ಯಾರೂ ಸಾಕ್ಷ್ಯಾಧಾರಗಳೊಂದಿಗೆ ಬಂದಿಲ್ಲ. ಇವರ ಆರೋಪಗಳು ನಿರಾಧಾರ’ ಎಂದು ಹೇಳಿದ್ದರು.

Previous Post
ವಿಶ್ವಾಸಮತ ಯಾಚನೆ: ಹೇಮಂತ್ ಸೊರೇನ್ ಭಾಗಿಯಾಗಲು ಕೋರ್ಟ್ ಅನುಮತಿ
Next Post
ಏಕನಾಥ ಶಿಂಧೆ ಆಪ್ತನ ಮೇಲೆ ಬಿಜೆಪಿ ಶಾಸಕನಿಂದ ಪೊಲೀಸ್‌ ಠಾಣೆಯಲ್ಲೇ ಗುಂಡಿನ ದಾಳಿ

Recent News