ಶಿವರಾಮ ಕಾರಂತ ಬಡಾವಣೆ ಮೇಲ್ವಿಚಾರಣಾ ಸಮಿತಿ ರದ್ದುಗೊಳಿಸಿದ ಹೈಕೋರ್ಟ್

ಶಿವರಾಮ ಕಾರಂತ ಬಡಾವಣೆ ಮೇಲ್ವಿಚಾರಣಾ ಸಮಿತಿ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಜನವರಿ 27: ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ದೂರುಗಳ ಪರಿಹಾರ ಹಾಗೂ ಮೇಲ್ವಿಚಾರಣೆಗೆ ನೇಮಿಸಲಾಗಿದ್ದ ಸಮಿತಿಯನ್ನು ಹೈಕೋರ್ಟ್ ರದ್ದು ಮಾಡಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಈ ಆದೇಶವನ್ನು ಮಾಡಿದೆ. ಕಳೆದ ವಾರವಷ್ಟೇ ಬಡಾವಣೆಯಲ್ಲಿನಿವೇಶನ ಹಂಚಿಕೆಗೆ ತಡೆ ನೀಡಿದ್ದ ಹೈಕೋರ್ಟ್‌ ತನ್ನ ಅನುಮತಿ ಇಲ್ಲದೆ ಹಂಚಿಕೆಗೆ ಅಧಿಸೂಚನೆ ಹೊರಡಿಸಬಾರದೆಂದು ಆದೇಶಿಸಿತ್ತು. ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಪ್ರರಕಣದ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯಪೀಠ, ಬಡಾವಣೆ ನಿರ್ಮಾಣ ಕುರಿತ ದೂರುಗಳ ಪರಿಹಾರಕ್ಕಾಗಿ ನಿವೃತ್ತ ನ್ಯಾ. ಎ.ವಿ.ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯನ್ನು ರದ್ದುಗೊಳಿಸಿದೆ.

ಅಲ್ಲದೆ, ತಾನೇ ಖುದ್ದು ನಿಗಾ ವಹಿಸುವುದಾಗಿ ಆದೇಶಿಸಿದೆ. ಸಮಿತಿಯ ದಾಖಲೆಗಳು ಮತ್ತು ದತ್ತಾಂಶವನ್ನು ವಶಕ್ಕೆ ತೆಗೆದುಕೊಳ್ಳುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಸೂಚನೆ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅಧಿಸೂಚಿತ ಪ್ರದೇಶದಲ್ಲಿ ಮೊದಲೇ ಇದ್ದ ಕಟ್ಟಡಗಳ ಮಾಲೀಕರ ದೂರುಗಳನ್ನು ಪರಿಹರಿಸುವ ಸಂಬಂಧ ಸುಪ್ರೀಂಕೋರ್ಟ್ 2020ರ ಡಿಸೆಂಬರ್‌ನಲ್ಲಿ ರಚಿಸಿದ್ದ ಸಮಿತಿ ರದ್ದುಗೊಳಿಸಿ ಆದೇಶ ಹೊರಡಿಸಿತು. ಸಮಿತಿಯ ಮುಖ್ಯಸ್ಥರು ಹಾಗೂ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಯೂ ಆಗಿರುವ ಎ.ವಿ.ಚಂದ್ರಶೇಖರ್‌ ಅವರು ಕೋರ್ಟ್‌ ಸೂಚಿಸಿದ್ದ ಕೆಲಸ ಕಾರ್ಯಗಳನ್ನು ಸಮಿತಿ ಪೂರ್ಣಗೊಳಿಸಿದೆ ಮತ್ತು ಆದೇಶಗಳನ್ನು ಜಾರಿಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಸಮಿತಿಯನ್ನು ಮುಂದುವರಿಸುವ ಅಗತ್ಯವಿಲ್ಲ, ಸಮಿತಿಯನ್ನು ಬರಖಾಸ್ತು ಮಾಡಬಹುದು ಎಂಬ ಶಿಫಾರಸನ್ನು ಅಂಗೀಕರಿಸಿದ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ. ಸಮಿತಿಯ ಇಬ್ಬರು ಸದಸ್ಯರಾದ ನಿವೃತ್ತ ಐಎಎಸ್‌ ಆಧಿಕಾರಿ ಜೈಕರ್‌ ಜರೋಮ್‌ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಟಿ.ರಮೇಶ್‌ ಮತ್ತೆ ಆರು ತಿಂಗಳ ಕಾಲ ಸಮಿತಿಯ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.

ಈ ಮಧ್ಯೆ, ನ್ಯಾಯಾಲಯ ಸಮಿತಿಗಾಗಿ ಈವರೆಗೆ 18 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ವೇತನ, ಸಭೆಗಳನ್ನು ನಡೆಸುವುದು ಮತ್ತು ಇತರೆ ಅನುಷ್ಠಾನ ಕಾರ್ಯಗಳೂ ಸಹ ಸೇರಿವೆ. ಮೂರು ಕೋಟಿ ರೂ.ಗಳನ್ನು ಸಮಿತಿಯ ದತ್ತಾಂಶವನ್ನು ಸಂರಕ್ಷಿಸಲು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಶೂನ್ಯ ವೆಚ್ಚ ತಗುಲುತ್ತದೆ ಏಕೆಂದರೆ ಆ ಕೆಲಸವನ್ನು ಬಿಡಿಎ ಅಧಿಕಾರಿಗಳೇ ಮಾಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಬಿಡಿಎ ಆವರಣದಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿಗೆ ಹಾಕಿದ್ದ ಬೀಗ ತೆರವು ಮಾಡಿ ಅದರಲ್ಲಿನ ದಾಖಲೆಗಳನ್ನು ರಿಜಿಸ್ಟ್ರಾರ್‌ ಜನರಲ್‌ ಭೌತಿಕವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿದೆ. ಜೊತೆಗೆ ಶಿವರಾಮ ಕಾರಂತ ಬಡಾವಣೆ ಕುರಿತು ಬಾಕಿ ಇರುವ ಎಲ್ಲಾ ವ್ಯಾಜ್ಯಗಳಲ್ಲಿಇದೇ ನ್ಯಾಯಪೀಠ ವರ್ಗಾವಣೆ ಮಾಡುವಂತೆಯೂ ಸೂಚಿಸಿದೆ. ಪ್ರಕರಣದ ಹಿನ್ನೆಲೆ ಏನು? 2700ಕ್ಕೂ ಅಧಿಕ ಎಕೆರೆಯಲ್ಲಿಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಿಸುತ್ತಿದೆ. ಅದರಲ್ಲಿಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿಕಾನೂನು ಹೋರಾಟ ನಡೆದು ಕೊನೆಗೆ ನ್ಯಾಯಾಲಯಗಳು ಭೂ ಸ್ವಾಧೀನ ಪ್ರಧಿಕ್ರಿಯೆ ಕ್ರಮ ಎತ್ತಿಹಿಡಿದಿದ್ದವು. ಆದರೆ, ಪರಿಹಾರ ಹಂಚಿಕೆಯಲ್ಲಿತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ಹಲವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ನಿವೃತ್ತ ನ್ಯಾ.ಎ.ವಿ.ಚಂದ್ರಶೇಖರ್‌ ನೇತೃತ್ವದ ತ್ರಿ ಸದಸ್ಯ ಸಮಿತಿಯನ್ನು 2020ರ ಡಿ.3ರಂದು ರಚನೆ ಮಾಡಿತ್ತು.ಆ ಸಮಿತಿ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾಸಮಸ್ಯೆಗಳನ್ನು ಪರಿಹರಿಸಿತು. ಸಮಿತಿಯ ಅವಧಿ 2023ರ ಡಿ.31ಕ್ಕೆ ಮುಕ್ತಾಯವಾಗಿತ್ತು. ಸಮಿತಿಯ ಅಧ್ಯಕ್ಷರಾಗಿದ್ದ ನ್ಯಾ. ಎ.ಬಿ.ಚಂದ್ರಶೇಖರ್‌ ಯಾವ ಉದ್ದೇಶಕ್ಕಾಗಿ ಸಮಿತಿ ರಚನೆ ಮಾಡಲಾಗಿತ್ತೋ ಆ ಉದ್ದೇಶ ಬಹುತೇಕ ಈಡೇರಿರುವುದರಿಂದ ಸಮಿತಿ ಮುಂದುವರಿಸುವುದು ಅಗತ್ಯವಿಲ್ಲ. ಸಮಿತಿ ಅಧಿಕಾರಾವಧಿ ಮುಂದುವರಿಸದೆ ವಿಸರ್ಜನೆ ಮಾಡಬಹುದು ಎಂದು ಹೇಳಿದ್ದರು. ಆದರೆ, ಸಮಿತಿಯ ಇತರೆ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಹಲವು ದೂರುಗಳಿದ್ದು, ಅವುಗಳನ್ನು ಪರಿಹರಿಸಬೇಕಾಗಿರುವುದರಿಂದ ಸಮಿತಿಯ ಅಧಿಕಾರಾಧಿವಧಿ ಆರು ತಿಂಗಳು ವಿಸ್ತರಣೆ ಮಾಡಬೇಕೆಂದು ಸುಪ್ರೀಂಕೋರ್ಟ್‌ನಲ್ಲಿಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್‌ ಆ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಿ ಅದೇ ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲಾಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

Previous Post
ಪತ್ರಕರ್ತರನ್ನು ಟ್ರೋಲ್‌ ಮಾಡಿ ಮತ್ತೆ ಉದ್ಧಟತನ ಮೆರೆದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
Next Post
ರಾಜ್ಯದ 219 ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆ

Recent News