ಸಂವಿಧಾನದಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದ ತೆಗೆಯುವಂತೆ ಬಿಜೆಪಿ ನಾಯಕನಿಂದ ಅರ್ಜಿ

ಸಂವಿಧಾನದಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದ ತೆಗೆಯುವಂತೆ ಬಿಜೆಪಿ ನಾಯಕನಿಂದ ಅರ್ಜಿ

ನವದೆಹಲಿ, ಫೆ. 10: ನವೆಂಬರ್ 26, 1949ರಂದು ಸಂವಿಧಾನದ ಪೀಠಿಕೆ ಅಂಗೀಕರಿಸಿದ ದಿನಾಂಕವನ್ನು ಬದಲಾಯಿಸದೆ ತಿದ್ದುಪಡಿ ಮಾಡಬಹುದೇ? ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಳಿದೆ. ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದು ಹಾಕುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಪ್ರಶ್ನೆ ಎತ್ತಿದೆ.

ಸಂವಿಧಾನದ ಪೀಠಿಕೆಯನ್ನು ಡಿಸೆಂಬರ್ 1976ರಲ್ಲಿ ಇಂದಿರಾ ಗಾಂಧಿ ಸರ್ಕಾರವು ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಲು ತಿದ್ದುಪಡಿ ಮಾಡಿತ್ತು. ‘ರಾಷ್ಟ್ರದ ಏಕತೆ’ ಎಂಬ ಪದಗುಚ್ಛವನ್ನು ‘ರಾಷ್ಟ್ರದ ಏಕತೆ ಮತ್ತು ಸಮಗ್ರತೆ’ ಎಂದು ಬದಲಾಯಿಸಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮೂಲ ಪೀಠಿಕೆಯಲ್ಲಿ ಭಾರತವನ್ನು ‘ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ’ ಎಂದು ಉಲ್ಲೇಖಿಸಲಾಗಿತ್ತು. ‘ಸಾರ್ವಭೌಮ’ ಮತ್ತು ‘ಪ್ರಜಾಪ್ರಭುತ್ವ’ದ ನಡುವೆ ‘ಸಮಾಜವಾದಿ’, ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಗಿದೆ ಎಂದು ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘1976ರಲ್ಲಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ ಮೂಲಕ ಪೀಠಿಕೆಯನ್ನು ತಿದ್ದುಪಡಿ ಮಾಡಿ, ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ತಿದ್ದುಪಡಿಯನ್ನು ಅಳವಡಿಸಿಕೊಂಡ ದಿನಾಂಕವನ್ನು 1949ರ ನವೆಂಬರ್‌ 29 ಎಂಬುದಾಗಿಯೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ, ಈ ವಿಷಯವನ್ನು ತಾರ್ಕಿಕ ದೃಷ್ಟಿಕೋನದಿಂದ ಅವಲೋಕಿಸುವುದು ಅಗತ್ಯ’ ಎಂದು ಹೇಳಿದೆ.

‘ಇದೇ ನಾವು ಅವಲೋಕಿಸಬೇಕಿರುವ ನಿಜವಾದ ಅಂಶ’ ಎಂದು ಸುಬ್ರಮಣಿಯನ್‌ ಸ್ವಾಮಿ ಹಾಗೂ ಹಾಗೂ ಇತರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ವಾದ–ಪ್ರತಿವಾದಗಳನ್ನು ಆಲಿಸಿದ ಪೀಠವು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿದೆ. ಅರ್ಜಿದಾರರಾದ ಸುಬ್ರಮಣಿಯನ್ ಸ್ವಾಮಿ, ಬಲರಾಮ್‌ ಸಿಂಗ್‌ ಹಾಗೂ ಇತರರ ಪರ ವಕೀಲ ವಿಷ್ಣುಶಂಕರ್‌ ಜೈನ್‌ ವಾದ ಮಂಡಿಸಿದ್ದಾರೆ.

Previous Post
ಮೋದಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ ಬಿಡುಗಡೆ
Next Post
ಸಮ್ಮಿಶ್ರ ಸರ್ಕಾರ ರಚನೆಗೆ ಷರೀಫ್-ಜರ್ದಾರಿ ಒಪ್ಪಿಗೆ

Recent News