ಸಿಎಂ ರಾಜೀನಾಮೆ ನೀಡಬೇಕು, ತಪ್ಪಿದರೆ ಅವರನ್ನು ವಜಾ ಮಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಸಿಎಂ ರಾಜೀನಾಮೆ ನೀಡಬೇಕು, ತಪ್ಪಿದರೆ ಅವರನ್ನು ವಜಾ ಮಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ರಾಷ್ಟ್ರಪತಿ ಹುದ್ದೆ, ಸಂವಿಧಾನಕ್ಕೆ ಮುಖ್ಯಮಂತ್ರಿಯಿಂದ ಅಪಚಾರ

****

ಬೆಂಗಳೂರು: ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧನೆ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿಗಳು; ರಾಷ್ಟ್ರಪತಿಗಳಿಗೆ ಅಪಚಾರ ಎಸಗಿರುವ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯ ಮಾಡಿದ್ದಾರೆ.

ಆಚಾರಗೆಟ್ಟ ಮುಖ್ಯಮಂತ್ರಿ:

ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಎಂದು ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು ಎಂದಿರುವ ಕುಮಾರಸ್ವಾಮಿ ಅವರು, ಸಿಎಂ ಬಳಸಿರುವ ಪದವನ್ನು ಬರೆಯಲಾರೆ ಎಂದು ಎಂದಿದ್ದಾರಲ್ಲದೆ, ಸಿದ್ದರಾಮಯ್ಯ ಆಚಾರಗೆಟ್ಟ ಮುಖ್ಯಮಂತ್ರಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಡೋಂಗೀ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ ಎಂದಿದ್ದಾರೆ ಕುಮಾರಸ್ವಾಮಿ ಅವರು.

ಶೋಷಿತರ ಜಾಗೃತಿ ಸಮಾವೇಶದಲ್ಲೇ ಅಪಮಾನ:

ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊತ್ತ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆ.. ಶೋಷಿತರ ಜಾಗೃತಿ ಸಮಾವೇಶದಲ್ಲೇ ಅವರಿಗೆ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕೀಲರಂತೆ, ಸ್ವಯಂಘೋಷಿತ ಸಂವಿಧಾನ ತಜ್ಞರಂತೆ.. ನಾಚಿಕೆಯಾಗಬೇಕು ಇವರಿಗೆ. ಸಾರ್ವಜನಿಕ ವೇದಿಕೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿಯೊಬ್ಬರು ಸಂಬೋಧಿಸುವ ರೀತಿಯೇ ಇದು. ಸಿದ್ದರಾಮಯ್ಯನವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ಅವರ ಈ ಕೀಳುಮಾತು ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಶನಿವಾರದಂದು ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಮಾತೆದ್ದಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

Previous Post
ಆಸ್ಟ್ರೇಲಿಯನ್ ಓಪನ್ ಗೆದ್ದು ಹೊಸ ಇತಿಹಾಸ ಬರೆದ ಕರ್ನಾಟಕದ ರೋಹನ್ ಬೋಪಣ್ಣ
Next Post
ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ.: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News