ಸೇನಾ ಪಡೆಗಳ ಪರೇಡ್ ಮುನ್ನಡೆಸಿದ ಮಹಿಳೆಯರು

ಸೇನಾ ಪಡೆಗಳ ಪರೇಡ್ ಮುನ್ನಡೆಸಿದ ಮಹಿಳೆಯರು

ನವದೆಹಲಿ, ಜ. 26: ಭಾರತ ಒಕ್ಕೂಟ ವ್ಯವಸ್ಥೆಯ 75ನೇ ವರ್ಷದ ಗಣರಾಜ್ಯೋತ್ಸವ ಇಂದು ಸಡಗರ ಸಂಭ್ರಮದಿಂದ ದೇಶದಾದ್ಯಂತ ನಡೆಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು. ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹಾಜರಿದ್ದರು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಈ ಬಾರಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.

ಧ್ವಜಾರೋಹಣದ ಬಳಿಕ ವಿವಿಧ ಸೇನಾ ಪಡೆಗಳಿಂದ ರಾಷ್ಟ್ರಪತಿ ಸೇರಿದಂತೆ ಗಣ್ಯರು ಗೌರವ ವಂದನೆ ಸ್ವೀಕರಿಸಿದರು. ಸೇನಾ ಪಡೆಗಳ ಪಥ ಸಂಚಲನ ಮನಮೋಹಕವಾಗಿತ್ತು. ನಂತರ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಇಲಾಖೆಗಳ ಸ್ಥಬ್ಧಚಿತ್ರಗಳ ಪ್ರದರ್ಶನ ನಡೆಯಿತು. ದೇಶ ವಿದೇಶಗಳ ಸಾವಿರಾರು ಜನರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಗಣರಾಜ್ಯೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂರೂ ಸೇನಾ ಪಡೆಯಿಂದ ಸಂಪೂರ್ಣ ಮಹಿಳೆಯರೇ ಇರುವ ತುಕಡಿಗಳು ಪರೇಡ್‌ನಲ್ಲಿ ಭಾಗವಹಿಸಿತ್ತು. ಭಾರತೀಯ ವಾಯು ಪಡೆಯು ವಿಮಾನ ಹಾರಾಟವನ್ನೂ 15 ಮಂದಿ ಮಹಿಳಾ ಪೈಲಟ್‌ಗಳು ಪ್ರದರ್ಶಿಸಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯು ತುಕಡಿಯೂ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಂಡಿತ್ತು.

ಪರೇಡ್ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ಸಾಂಪ್ರದಾಯಿಕ ಸೇನಾ ಬ್ಯಾಂಡ್ ಬದಲು ಭಾರತೀಯ ಸಂಗೀತ ವಾದ್ಯಗಳಾದ ಶಂಖ, ನಾದಸ್ವರ ಹಾಗೂ ನಾಗಡವನ್ನು ನುಡಿಸಿದರು. ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್‌ಡಿಒ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರ ನಿರ್ಣಾಯಕ ಕೊಡುಗೆಗಳನ್ನು ಎತ್ತಿ ತೋರಿಸಿತು. ಸುಜನಾ ಚೌಧರಿ ಮತ್ತು ಎ ಭುವನೇಶ್ವರಿ ಅವರಂತಹ ವಿಜ್ಞಾನಿಗಳ ಸಾಧನೆಯನ್ನು ಬಿಂಬಿಸಿತು.

Previous Post
75 ಕೋಟಿ ಭಾರತೀಯರ ಮಾಹಿತಿ ಮಾರಾಟಕ್ಕೆ: ವರದಿ
Next Post
ಜ್ಞಾನವಾಪಿ ಪ್ರಕರಣ: ಹಿಂದೂ ಪರ ವಕೀಲನಿಂದ ಎಎಸ್‌ಐ ಸಮೀಕ್ಷೆ ವರದಿ ಬಹಿರಂಗ

Recent News