ಹರ್ಷ ಮಂದರ್ ನಿವಾಸದ ಮೇಲೆ ಸಿಬಿಐ ದಾಳಿ

ಹರ್ಷ ಮಂದರ್ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ, ಫೆ. 2: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರದ ವಿರುದ್ಧ ವಿಮರ್ಶಾತ್ಮಕ ನಿಲುವು ಹೊಂದಿದ್ದುದರಿಂದ ಹರ್ಷ ಮಂದರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

“ಹರ್ಷ ಮಂದರ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ. ಹರ್ಷ ಮಂದರ್ ಅತ್ಯಂತ ವಿನಯದ, ಮಾನವೀಯ ಹಾಗೂ ಉದಾರ ವ್ಯಕ್ತಿತ್ವದ ಹೋರಾಟಗಾರ. ಅವರು ದುರ್ಬಲ ಹಾಗೂ ಬಡವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎಲ್ಲ ತನಿಖಾ ಸಂಸ್ಥೆಗಳೂ ಅದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಂಡಿವೆ. ತನ್ನನ್ನು ಟೀಕಿಸುವವರ ವಿರುದ್ಧ ಸರ್ಕಾರವು ನಿರ್ದಯವಾಗಿ ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಕಳೆದ ವರ್ಷ ಗೃಹ ವ್ಯವಹಾರಗಳ ಸಚಿವಾಲಯ ಮಂದರ್ ಮತ್ತು ಅಮನ್ ಬಿರಾದಾರಿ ಅವರು ಸ್ಥಾಪಿಸಿದ ಎನ್‌ಜಿಒ ವಿರುದ್ಧ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯಡಿ ತನಿಖೆ ಪ್ರಾರಂಭಿಸಲು ಸಿಬಿಐಗೆ ಸೂಚಿಸಿದ ನಂತರ ಸಿಬಿಐ ಎಫ್‌ಐಆರ್ ದಾಖಲಿಸಿದೆ. “ನಾವು ಅವರ ನಿವಾಸದಲ್ಲಿ ಮತ್ತು ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (ಸಿಇಎಸ್‌) ಕಚೇರಿ ಆವರಣದಲ್ಲಿ ಶೋಧ ನಡೆಸುತ್ತಿದ್ದೇವೆ” ಎಂದು ಸಿಬಿಐ ತಿಳಿಸಿದ್ದಾಗಿ ವರದಿಗಳು ಹೇಳಿವೆ.

2021ರಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷ ಮಂದರ್ ಅವರ ಕಚೇರಿಗಳು ಮತ್ತು ಮನೆಯಲ್ಲಿ ಪರಿಶೀಲನೆ ನಡೆಸಿತ್ತು. ಇಡಿ ದಾಳಿಯು ಸಿಇಎಸ್‌ ವಿರುದ್ಧ ದೆಹಲಿ ಪೋಲೀಸರ ಆರ್ಥಿಕ ಅಪರಾಧಗಳ ವಿಭಾಗ ದಾಖಲಿಸಿದ ಮತ್ತೊಂದು ಪ್ರಕರಣವನ್ನು ಆಧರಿಸಿದೆ. ಮಂದರ್ ಸಿಇಎಸ್‌ನ ನಿರ್ದೇಶಕರಾಗಿದ್ದಾರೆ.

Previous Post
ರಾಜಕೀಯಕ್ಕೆ ನಟ ವಿಜಯ್ ಎಂಟ್ರಿ
Next Post
ಜಾರ್ಖಂಡ್‌ನ ನೂತನ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ

Recent News