ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ

ಬೆಂಗಳೂರು,ಜ.23- ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ. ಈ ಹಿಂದೆ 2021 ರ ಅಕ್ಟೋಬರ್ 23 ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ 54 ಸಾವಿರ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು.ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ನಿನ್ನೆಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲಿಖಿತ ಮರುಪರೀಕ್ಷೆಯ ಹೊಣೆಗಾರಿಕೆಯನ್ನು ಒಪ್ಪಿಸಿದೆ.ಹಿಂದಿನಂತೆ ಯಾವುದೇ ಅಕ್ರಮ, ಅವ್ಯವಹಾರ ಚಟುವಟಿಕೆಗಳು ನಡೆಯದಂತೆ ಬಿಗಿಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 40 ಕ್ಕೂ ಹೆಚ್ಚು ಕೆಎಸ್‍ಆರ್‍ಪಿ ಮತ್ತು ಸಿಎಆರ್ ಬೆಟಾಲಿಯನ್‍ನಲ್ಲಿನ ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಫ್ತಿಯಲ್ಲೂ ಪೊಲೀಸರು ಗಸ್ತಿನಲ್ಲಿದ್ದರು.

ಅನುಮಾನಸ್ಪದವಾಗಿ ಓಡಾಡುವರು, ಗಾಳಿಸುದ್ಧಿ ಹಬ್ಬಿಸುವ ಕಿಡಿಗೇಡಿಗಳು, ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳ ಮೇಲೆ ನಿಗಾ ಇರಿಸಲಾಗಿತ್ತು. ಲೋಹ ಶೋಧಕ ಯಂತ್ರದ ಮೂಲಕ ಪ್ರತಿ ಅಭ್ಯರ್ಥಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಮೊಬೈಲ್, ಬ್ಲೂಟೂತ್, ಸ್ಮಾರ್ಟ್‍ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ ಡಿವೈಜ್‍ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರದಂತೆ ನಿರ್ಬಂಧಿಸಲಾಗಿತ್ತು.ನಿರ್ದಿಷ್ಠವಾದ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿತ್ತು. ಹೆಣ್ಣು ಮಕ್ಕಳಿಗೆ ತಾಳಿ ಮತ್ತು ಅದರೊಂದಿಗಿನ ಸರ ಹೊರತುಪಡಿಸಿ ಅನಗತ್ಯವಾದ ಆಭರಣಗಳಿಗೆ ಅವಕಾಶ ನಿರಾಕರಿಸಲಾಗಿತ್ತು. ಬೆಳಿಗ್ಗೆ 8.30 ಕ್ಕೆ ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿ ತಪಾಸಣೆಗೆ 2 ಗಂಟೆ ಸಮಯ ಲಭ್ಯವಿದ್ದು, ಬಹುತೇಕ ಅಭ್ಯರ್ಥಿಗಳು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು.

ಹಲವು ಹಂತಗಳ ತಪಾಸಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆದ ಅಭ್ಯರ್ಥಿಗಳು ಸಿಸಿ ಟಿವಿ ಮತ್ತು ಪರೀಕ್ಷಾ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಮರುಪರೀಕ್ಷೆಯನ್ನು ಎದುರಿಸಿದರು. ಕಳೆದ ಮೂರು ವರ್ಷಗಳಿಂದಲೂ ಪೊಲೀಸ್ ಸಮವಸ್ತ್ರ ಧರಿಸುವ ಕನಸು ಕಾಣುತ್ತಿದ್ದವರಿಗೆ ಈ ಹಿಂದಿನ ಪರೀಕ್ಷಾ ಅಕ್ರಮಗಳು ದುಃಸ್ವಪ್ನವಾಗಿ ಕಾಡಿವೆ. ಹಾಗಾಗಿ ಬಹುತೇಕರಿಗೆ ಪರೀಕ್ಷೆ ಬರೆಯುವ ಹುಮ್ಮಸ್ಸೇ ತಗ್ಗಿದಂತೆ ಕಂಡುಬಂದಿತ್ತು. ಕೆಲವರು ಈಗಲೂ ತಮಗೆ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ. ಪರೀಕ್ಷಾ ಪ್ರಾಧಿಕಾರ ಮತ್ತು ಸರ್ಕಾರ ಯಾವುದೇ ಅಕ್ರಮಗಳಾಗದಂತೆ ಪಾರದರ್ಶಕ ಹಾಗೂ ಮುಕ್ತ ಪರೀಕ್ಷೆ ನಡೆಸಬಹುದೆಂಬ ನಿರೀಕ್ಷೆಗಳಿವೆ ಎಂದು ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

Previous Post
2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ: ವರದಿ
Next Post
ಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ ಜಯಲಲಿತಾ ಅವರಿಂದ ವಶಪಡಿಸಿಕೊಂಡ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಆದೇಶಿಸಿದೆ.

Recent News