ಇಡಿ ಬಂಧನ ಅಪಾಯದಲ್ಲಿ ಕೇಜ್ರಿವಾಲ್ ಆರೋಗ್ಯ ಆಪ್ ಆರೋಪ ತಿರಸ್ಕರಿಸಿದ ತಿಹಾರ್ ಜೈಲು ಅಧಿಕಾರಗಳು

ಇಡಿ ಬಂಧನ ಅಪಾಯದಲ್ಲಿ ಕೇಜ್ರಿವಾಲ್ ಆರೋಗ್ಯ, ಆಪ್ ಆರೋಪ ತಿರಸ್ಕರಿಸಿದ ತಿಹಾರ್ ಜೈಲು ಅಧಿಕಾರಗಳು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ಸಚಿವ ಅತಿಶಿ ಆರೋಪಿಸಿದ್ದಾರೆ. ಬುಧವಾರ ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅತಿಶಿ, ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಆರೋಗ್ಯ ಸಮಸ್ಯೆ ಇದ್ದರೂ ಅವರು ರಾಷ್ಟ್ರದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಬಂಧನಗೊಂಡ ದಿನದಿಂದ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶವೇ ಅಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು. ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ.

ಮಂಗಳವಾರ ಬೆಳಗ್ಗೆ ಕೇಜ್ರಿವಾಲ್ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿತ್ತು. ಅವರ ಶುಗರ್ ಲೆವೆಲ್ ಏರುಪೇರಾಗುತ್ತಿದ್ದರಿಂದ ತಿಹಾರ್ ಜೈಲಿನ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ತಿಹಾರ್ ಜೈಲಿನ ಮೂಲಗಳ ಪ್ರಕಾರ, ಅವರನ್ನು ಜೈಲಿಗೆ ಕರೆ ತಂದಾಗ ಅವರ ತೂಕ 55 ಕೆಜಿ ಇತ್ತು ಹಾಗೂ ಅವರ ತೂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇಜ್ರಿವಾಲ್ ಅವರ ದೇಹದಲ್ಲಿ ಸಕ್ಕರೆ ಪ್ರಮಾಣವು ಸಾಮಾನ್ಯವಾಗಿದ್ದು, ಅವರು ಪ್ರತಿ ದಿನ ಬೆಳಗ್ಗೆ ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

Previous Post
ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ವಿವಾದತ್ಮಾಕ ಹೇಳಿಕೆ
Next Post
ಭಾರತೀಯ ಬಿಲಿಯನೇರ್‌ಗಳ ಸಂಪತ್ತು 41% ಹೆಚ್ಚಳ – ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿಗೆ ಅಗ್ರಸ್ಥಾನ

Recent News