ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಜಲಂಧರ್‌ನಿಂದ ಚನ್ನಿ ಕಣಕ್ಕೆ

ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಜಲಂಧರ್‌ನಿಂದ ಚನ್ನಿ ಕಣಕ್ಕೆ

ನವದೆಹಲಿ, ಏ. 15: ಲೋಕಸಭೆ ಚುನಾವಣೆಗೆ ಹತ್ತು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್ ಮತ್ತು ಜಲಂಧರ್‌ನಿಂದ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು) ದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕನ್ಹಯ್ಯಾ ಕುಮಾರ್ (37) ಅವರು ಭೋಜ್‌ಪುರಿ ನಟ-ಗಾಯಕ ಮತ್ತು ಈಶಾನ್ಯ ದೆಹಲಿಯಿಂದ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ದಾರೆ. ಮೇ 25 ರಂದು ಮತದಾನ ನಡೆಯಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಅವರು ಬಿಹಾರದ ಬೇಗುಸರಾಯ್‌ನಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಅವರು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ನಂತರ ಅವರು 2021ರಲ್ಲಿ ಕಾಂಗ್ರೆಸ್ ಸೇರಿದರು. ಮನೋಜ್ ತಿವಾರಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ ನಂತರ ಈಶಾನ್ಯ ದೆಹಲಿ ಕ್ಷೇತ್ರದಿಂದ ಬಿಜೆಪಿಯ ಎರಡು ಬಾರಿ ಸಂಸದರಾಗಿದ್ದಾರೆ.

ಪಕ್ಷದ ಹಿರಿಯ ನಾಯಕ ಜೈ ಪ್ರಕಾಶ್ ಅಗರ್ವಾಲ್ ಅನ್ನು ಚಾಂದಿನಿ ಚೌಕದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಅಗರ್ವಾಲ್ ಅವರು ಎರಡು ಬಾರಿಯ ಸಂಸದ ಮತ್ತು ಮಾಜಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬದಲಿಗೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಅವರನ್ನು ಎದುರಿಸಲಿದ್ದಾರೆ. ಪಕ್ಷವು ಉದಿತ್ ರಾಜ್ ಅವರನ್ನು ವಾಯುವ್ಯ ದೆಹಲಿಯಿಂದ ಕಣಕ್ಕಿಳಿಸಿದೆ. ಬಿಜೆಪಿಯು ತನ್ನ ಹಾಲಿ ಸಂಸದ ಹನ್ಸ್ ರಾಜ್ ಹನ್ಸ್ ಬದಲಿಗೆ ಯೋಗೇಂದ್ರ ಚಂದೋಲಿಯಾ ಅವರಿಗೆ ಈ ಕ್ಷೇತ್ರದ ಟಿಕೆಟ್ ನೀಡಿದೆ.

ಪಂಜಾಬ್‌ನ ಅಮೃತಸರದಿಂದ ಬಿಜೆಪಿ ಅಭ್ಯರ್ಥಿ ಮತ್ತು ಯುಎಸ್‌ನ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ವಿರುದ್ಧ ಗುರ್ಜಿತ್ ಸಿಂಗ್ ಔಜ್ಲಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಪಕ್ಷದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಜಲಂಧರ್ ಎಸ್‌ಸಿಗೆ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಇದಲ್ಲದೆ, ಫತೇಘರ್ ಸಾಹಿಬ್‌ನಿಂದ ಅಮರ್ ಸಿಂಗ್, ಬಟಿಂಡಾದಿಂದ ಜೀತ್ ಮೊಹಿಂದರ್ ಸಿಂಗ್ ಸಿಧು, ಸಂಗ್ರೂರ್‌ನಿಂದ ಸುಖಪಾಲ್ ಸಿಂಗ್ ಖೈರಾ ಮತ್ತು ಪಟಿಯಾಲದಿಂದ ಧರಂವೀರ್ ಗಾಂಧಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಉತ್ತರ ಪ್ರದೇಶದ ಅಲಹಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಉಜ್ವಲ್ ರೇವತಿ ರಮಣ್ ಸಿಂಗ್ ಅವರನ್ನು ಪಕ್ಷ ಘೋಷಿಸಿದೆ.

Previous Post
ಬಿಜೆಪಿಗೆ ಮುಳುವಾದ ‘ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ
Next Post
ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ಹೊಡೆದಾಟ: ಮೂವರಿಗೆ ಗಾಯ

Recent News