ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ಹೊಡೆದಾಟ: ಮೂವರಿಗೆ ಗಾಯ

ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ಹೊಡೆದಾಟ: ಮೂವರಿಗೆ ಗಾಯ

ಅಮೃತಸರ, ಏ. 15: ಪಂಜಾಬ್‌ ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಬೀದಿಗೆ ಬಂದಿದ್ದು, ಲೂಧಿಯಾನ ಜಿಲ್ಲೆಯ ಪಾಯಲ್ ಪಟ್ಟಣದಲ್ಲಿ ಭಾನುವಾರ ನಡೆದ ಬೂತ್ ಶೃಂಗಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವೇದಿಕೆಯಲ್ಲಿದ್ದ ಮೇಜುಗಳು, ಕುರ್ಚಿಗಳು, ಮೈಕ್ರೊಫೋನ್ ಸ್ಟ್ಯಾಂಡ್ ಇತ್ಯಾದಿಗಳನ್ನು ತೂರಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಹರ್ಜಿತ್ ಸಿಂಗ್ ಗ್ರೆವಾಲ್ ಅವರ ಸಮ್ಮುಖದಲ್ಲಿ ಈ ಬೆಳವಣಿಗೆ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಮೈಕ್‌ ಸ್ಟ್ಯಾಂಡ್‌, ರಾಡ್‌, ಟೇಬಲ್‌ಗಳು, ಕುರ್ಚಿಗಳಿಂದ ಪರಸ್ಪರ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸರೆಯಾಗಿದೆ.
ಈ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ ಹರ್ಜಿತ್ ಸಿಂಗ್ ಗ್ರೆವಾಲ್, ಫತೇಘರ್ ಸಾಹಿಬ್ ಲೋಕಸಭಾ ಕ್ಷೇತ್ರದ ಬೂತ್ ಶೃಂಗಸಭೆ ನಡೆದಿತ್ತು. ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದೆ. ಸಭೆಯಲ್ಲಿ ಘರ್ಷಣೆ ಸಂಭವಿಸಿದೆ. ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಸ್ಥಳೀಯ ಮುಖಂಡರೊಬ್ಬರು ಒತ್ತಾಯಿಸಿದ ನಂತರ ಮಾತಿನ ಚಕಮಕಿ ನಡೆಯಿತು. ಆದರೆ, ಸಮಯದ ಅಭಾವದಿಂದ ಹಿರಿಯ ನಾಯಕರಿಗೆ ಮಾತ್ರ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಲಾಯಿತು. ತನಗೂ ವೇದಿಕೆಯಲ್ಲಿ ಮಾತನಾಡಬೇಕು ಎಂದು ಹೇಳಿದ ಆ ವ್ಯಕ್ತಿ ವೇದಿಕೆಯ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿಯ ಜೊತೆ ವಾಗ್ವಾದ ನಡೆಸಿದರು. ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡರು ಮತ್ತು ನಂತರ ಕುರ್ಚಿಗಳು ಮತ್ತು ಟೇಬಲ್‌ಗಳಂತಹ ವಸ್ತುಗಳನ್ನು ಪರಸ್ಪರ ಎಸೆಯಲು ಪ್ರಾರಂಭಿಸಿದ್ದಾರೆ. ನಾನು ಸ್ಥಳದಿಂದ ಹೊರಗೆ ಹೋಗಿದ್ದೆ ಎಂದು ಹೇಳಿದ್ದಾರೆ.

ಬಿಜೆಪಿ ಖನ್ನಾ ಜಿಲ್ಲಾಧ್ಯಕ್ಷ ಭೂಪಿಂದರ್ ಸಿಂಗ್ ಚೀಮಾ ಮಾತನಾಡಿ, ಬೂತ್ ಶೃಂಗಸಭೆಯ ಶಿಷ್ಟಾಚಾರವನ್ನು ಅನುಸರಿಸಿ, ಹಿರಿಯ ನಾಯಕರಿಗೆ ಮಾತ್ರ ವೇದಿಕೆಯಲ್ಲಿ ಕುಳಿತುಕೊಳ್ಳಲು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶವಿದೆ. ಆದರೆ ಸಭಿಕರ ನಡುವೆ ಕುಳಿತಿದ್ದ ನಮ್ಮ ಪಕ್ಷದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಜಸ್ವಿರ್ ಕೌರ್ ಅವರ ಪತಿ ಗುಲ್ಜಾರ್ ಸಿಂಗ್ ಅವರು ವೇದಿಕೆಯಲ್ಲಿ ಮಾತನಾಡಲು ಸಮಯ ನೀಡಬೇಕು ಎಂದು ಒತ್ತಾಯಿಸಿದರು. ನಿರಾಕರಿಸಿದಾಗ ಅವರು ಆಕ್ರೋಶಗೊಂಡು ಇತರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಅವರ ಮೇಲೆ ಮೈಕ್ರೊಫೋನ್ ಸ್ಟ್ಯಾಂಡ್‌ನಿಂದ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಖನ್ನಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಜಸ್ವಿರ್ ಕೌರ್, ಚೀಮಾ ಅವರ ಸಹಾಯಕರು ತನ್ನ ಪತಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಮತ್ತು ನಿಂದಿಸಿದ್ದಾರೆ ಮತ್ತು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಯಲ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಗರ್ಗ್, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಯಾವುದೇ ವ್ಯಕ್ತಿಯು ಈ ಸಂಬಂಧ ಲಿಖಿತ ದೂರನ್ನು ಸಲ್ಲಿಸದ ಕಾರಣ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Previous Post
ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಜಲಂಧರ್‌ನಿಂದ ಚನ್ನಿ ಕಣಕ್ಕೆ
Next Post
ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಮೋದಿ ಗ್ಯಾರಂಟಿ ಶೂನ್ಯ – ಸಚಿವ ದಿನೇಶ್ ಗುಂಡೂರಾವ್

Recent News