ಕಲ್ಲಿದ್ದಲು ಹಗರಣ: ಅದಾನಿ ವಿರುದ್ಧ ಕ್ರಮ ಯಾಕಿಲ್ಲ? ಪ್ರತಿಪಕ್ಷಗಳ ವಾಗ್ಧಾಳಿ

ಕಲ್ಲಿದ್ದಲು ಹಗರಣ: ಅದಾನಿ ವಿರುದ್ಧ ಕ್ರಮ ಯಾಕಿಲ್ಲ? ಪ್ರತಿಪಕ್ಷಗಳ ವಾಗ್ಧಾಳಿ

ನವದೆಹಲಿ, ಮೇ 23: ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ಅದಾನಿ ಕಂಪೆನಿ ವಂಚನೆ ಮಾಡಿದೆ’ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಮತ್ತು ಫೈನಾನ್ಷಿಯಲ್ ಟೈಮ್ಸ್‌ನ ತನಿಖಾ ವರದಿ ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲಿ ಅದಾನಿ ಗ್ರೂಪ್‌ನ ವಂಚನೆಗೆ ಸಂಬಂಧಿಸಿ ‘ಸಿಬಿಐ’, ‘ಇಡಿ’ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಗೌತಮ್ ಅದಾನಿ ಅವರ ಕಂಪನಿಯು ‘ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ವಂಚನೆ ಮಾಡಿದೆ’ ಎಂದು ವರದಿಯು ಬಹಿರಂಗಪಡಿಸಿದ್ದು, ಬೆಲೆ ಏರಿಕೆಯ ಎಲ್ಲಾ ಆರೋಪಗಳನ್ನು ಅದಾನಿ ತಿರಸ್ಕರಿಸಿದ್ದಾರೆ. ದಾಖಲೆಗಳ ಪ್ರಕಾರ, ಜನವರಿ 2014ರಲ್ಲಿ ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಲ್ಲಿದ್ದಲು ಖರೀದಿಸಿತ್ತು. ಅದು ಗುಣಮಟ್ಟದಲ್ಲಿ ಪ್ರತಿ ಕಿಲೋಗ್ರಾಮ್‌ಗೆ 3,500 ಕ್ಯಾಲೊರಿಗಳನ್ನು ಹೊಂದಿತ್ತು. ಆದರೆ, ಆ ಕಲ್ಲಿದ್ದಲ್ಲನ್ನು ತಮಿಳುನಾಡು ಜನರೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಕಂಪನಿಗೆ (ತಂಗೆಡ್ಕೋ) ಅತ್ಯಮೂಲ್ಯ ದರ್ಜೆಯ 6,000 ಕ್ಯಾಲೋರಿಯ ಕಲ್ಲಿದ್ದಲು ಎಂದು ಮಾರಾಟ ಮಾಡಲಾಗಿದೆ. ಈ ಮೂಲಕ ಸಾರಿಗೆ ವೆಚ್ಚ ಹೊರತುಪಡಿಸಿ ಅದಾನಿ ಎರಡು ಪಟ್ಟು ಲಾಭ ಪಡೆದಿದೆ.

ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್‌ನ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಮಾರುಕಟ್ಟೆ ವಂಚನೆ ಬಗ್ಗೆ ಆರೋಪಿಸಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದವು. OCCRP ಮತ್ತು ಫೈನಾನ್ಷಿಯಲ್ ಟೈಮ್ಸ್‌ ತನಿಖಾ ವರದಿ ಪ್ರಕಟಿಸಿದ ನಂತರ, 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ವಿರೋಧ ಪಕ್ಷಗಳು ಹಗರಣದ ಪುರಾವೆಗಳು ಲಭ್ಯವಿದ್ದರೂ ಅದಾನಿ ಸಾಮ್ರಾಜ್ಯದ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿತ ಹಗರಣದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಮೋದಿ ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದ ‘ಅದಾನಿ ಮತ್ತು ಅಂಬಾನಿ ಕಾಂಗ್ರೆಸ್‌ಗೆ ಟೆಂಪೋಗಳಲ್ಲಿ ಹಣ ಲಂಚ’ ನೀಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ವರ್ಷಗಳಿಂದ ಈ ಹಗರಣದ ಮೂಲಕ ಮೋದಿಜಿಯವರ ನೆಚ್ಚಿನ ಗೆಳೆಯ ಅದಾನಿ ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಅದರ ಬೆಲೆಯನ್ನು ಸಾಮಾನ್ಯ ಜನರು ವಿದ್ಯುತ್ ಬಿಲ್ಲುಗಳ ಮೂಲಕ ತಮ್ಮ ಜೇಬಿನಿಂದ ಪಾವತಿಸಿದ್ದಾರೆ. ಈ ಬಹಿರಂಗ ಭ್ರಷ್ಟಾಚಾರದ ಬಗ್ಗೆ ಇಡಿ, ಸಿಬಿಐ ಮತ್ತು ಐಟಿಯನ್ನು ಮೌನವಾಗಿರಿಸಲು ಎಷ್ಟು ಟೆಂಪೋಗಳನ್ನು ಬಳಸಲಾಗಿದೆ ಎಂದು ಪ್ರಧಾನಿ ಹೇಳುವರೇ? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬಂದರೆ ಈ ಹಗರಣದ ಬಗ್ಗೆ ವಿವರವಾಗಿ ತನಿಖೆ ನಡೆಸಲಿದೆ ಎಂದು ರಾಹುಲ್‌ ಗಾಂಧಿ ಭರವಸೆಯನ್ನು ನೀಡಿದ್ದಾರೆ. ಈ ವಿಷಯದ ಕುರಿತು ‘ಮೋದಿ-ಅದಾನಿ ಕಾ ಕೋಲ್ ಮಾಲ್’ ಎಂಬ ಶೀರ್ಷಿಕೆಯ ವ್ಯಂಗ್ಯ ಚಿತ್ರದ ಪೋಸ್ಟರ್‌ನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಸಂಸತ್ತಿನಲ್ಲಿ ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ್ದ ಮತ್ತು ಬಳಿಕ ವಿವಾದಾತ್ಮಕವಾಗಿ ಹೊರಹಾಕಲ್ಪಟ್ಟ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಕೂಡ ಈ ವಿಷಯದಲ್ಲಿ ತನಿಖಾ ಸಂಸ್ಥೆಗಳ ಆಸಕ್ತಿಯ ಕೊರತೆಯನ್ನು ಪ್ರಸ್ತಾಪಿಸಿ ಪೋಸ್ಟ್‌ ಮಾಡಿದ್ದಾರೆ. ನನ್ನ ಸೀರೆಗಳನ್ನು ಎಣಿಸಿದ್ದ ಮತ್ತು ನನ್ನ ಸ್ನೇಹಿತರಿಗೆ ಕರೆ ಮಾಡಿದ್ದ ಸಿಬಿಐ ಮತ್ತು ಇಡಿಗೆ ಈ ಕುರಿತು ತನಿಖೆ ಮಾಡಲು ಹೇಳಿ ಎಂದು ಮಹುವಾ ಮೊಯಿತ್ರಾ ಪ್ರಧಾನಿಗೆ ತನ್ನ ಮೇಲೆ ಈ ಹಿಂದೆ ನಡೆದಿರುವ ದಾಳಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಟಿಎಂಸಿ ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಸರ್ಕಾರಿ ಆರ್ಥಿಕ ಅಪರಾಧದ ತನಿಖಾಧಿಕಾರಿಗಳು ಈ ಸಾಕ್ಷ್ಯವನ್ನು ಏಕೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಕೇಳಿದ್ದಾರೆ. ಶಿವಸೇನೆಯ(ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಅವರು ಕಲ್ಲಿದ್ದಲು ವೆಚ್ಚದ “ಪವಾಡ” ಒಂದಲ್ಲ 24 ಬಾರಿ ಸಂಭವಿಸಿದೆ, ಪ್ರಧಾನಿ ಒಬ್ಬ ಜಾದೂಗಾರ ಎಂದು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Previous Post
ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ ನೀತಿ-ನಿರೂಪಣೆಯಲ್ಲಿ ಪ್ರಾತಿನಿಧ್ಯವಿಲ್ಲ: ರಾಹುಲ್ ಗಾಂಧಿ
Next Post
ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತಯಾರಿ

Recent News