ದಳಪತಿಗಳು ಏನೇ ಅಂದ್ರೂ ಮಂಡ್ಯ ನಂದೇ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸುಮಲತಾ

ದಳಪತಿಗಳು ಏನೇ ಅಂದ್ರೂ ಮಂಡ್ಯ ನಂದೇ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸುಮಲತಾ

ಮಂಡ್ಯ,ಮಾರ್ಚ್‌ 18: ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ರಂಗು ಜೋರಾಗಿದೆ. ಕಮಲ-ದಳ ದೋಸ್ತಿಯಲ್ಲಿ ಬಿರುಕು ಉಂಟಾಗಿದ್ದು, ಮಂಡ್ಯ, ಹಾಸನ ಹಾಗೂ ಕೋಲಾರದಿಂದ ಜೆಡಿಎಸ್‌ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ರೆ, ಇತ್ತ ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಹಾಲಿ ಸಂಸದೆ ಸುಮಲತಾ ಅಚ್ಚರಿ ಹೇಳಿಕೆ ನೀಡಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏರ್ಪಟ್ಟಿದ್ದ ಜಟಾಪಟಿ ಈ ಬಾರಿಯೂ ಏರ್ಪಡುವ ಎಲ್ಲಾ ಲಕ್ಷಣಗಳು ಕಂಡ ಬರುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಗಾಗಿ ಸೋಮವಾರ ಜೆ ಪಿ ನಡ್ಡಾ ಅವರನ್ನ ಸುಮಲತಾ ಅವರು ಭೇಟಿ ಮಾಡಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದಾರೆ.

ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಸುಮಲತಾ ಅವರು ಮಾತನಾಡಿ, ನಾನು ಸ್ಪರ್ಧೆ ಮಾಡಬೇಕು ಎನ್ನುವುದಕ್ಕಿಂತ, ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ತಳಮಟ್ಟದಲ್ಲಿ ಬಿಜೆಪಿ ಸಂಘಟನೆಯಾಗಲಿದೆ ಎಂದು ಹೇಳಿದ್ದಾರೆ. ಇನ್ನೂ ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ, ಲೋಕಸಭೆ ಅವಧಿ ಮುಗಿದ ಬಳಿಕ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಹೇಳಿದರು. ಮಂಡ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಿಮ್ಮನ್ನು ಮತ್ತು ನಿಮ್ಮ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದು ಪ್ರಧಾನಿ ಮೋದಿಯವರೇ ನನಗೆ ಭರವಸೆ ನೀಡಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಇನ್ನೂ ಆಗಿಲ್ಲ, ನೀವು ನಿಶ್ಚಿಂತೆಯಾಗಿ ಇರಿ, ಇನ್ನು ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತಹ ನಾಯಕಿ ಪಕ್ಷಕ್ಕೆ ಬೇಕು ಎಂದು ನಡ್ಡಾ ಹೇಳಿದ್ದಾರೆ ಎಂದು ತಿಳಿಸಿದರು. ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಕ್ಷೇತ್ರ ಖಾಲಿ ಇದೆಯೋ, ಅಲ್ಲಿ ನನ್ನ ಹೆಸರು ಜೋಡಿಸುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು.

ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ, ನಾನು ಅವರನ್ನೇ ಕೇಳುತ್ತೇನೆ. ಇದೆಲ್ಲ ಕೇವಲ ಮಾಧ್ಯಮಗಳ ಉಹಾಪೋಹ. ಇಂದು ದೆಹಲಿಯಲ್ಲೆ ಇರಲು ಹೇಳಿದ್ದಾರೆ. ಪ್ರಧಾನಿ ಮೋಧಿ ಕಚೇರಿಯಿಂದ ಕರೆಬಂದಿತ್ತು, ಅಮಿತ್ ಶಾ ಜತೆ ಭೇಟಿಯಾಗಿ ಮಾತನಾಡಲು ಹೇಳಿದ್ದಾರೆ. ನನ್ನ ಮುಂದಿನ ನಿರ್ಧಾರವನ್ನು ಕ್ಷೇತ್ರಕ್ಕೆ ತೆರಳಿ, ನಮ್ಮ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದರು. ಹಾಸನ, ಮಂಡ್ಯ, ಕೋಲಾರದಲ್ಲಿ ಜೆಡಿಎಸ್ ಗೆ: ಹೆಚ್ಡಿಕೆ ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು. ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗೋವರೆಗೂ ಮಾತನಾಡುವುದಿಲ್ಲ. ಆದರೆ, ಅಭ್ಯರ್ಥಿಗಳ ಘೋಷಣೆ ಹಾಗೂ ಕ್ಷೇತ್ರಗಳ ಹಂಚಿಕೆ ವಿಳಂಬ ಆಗುತ್ತಿದೆ ಎಂದು ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದರು. ನಾವು ಬಿಜೆಪಿಯಿಂದ 6-7 ಸೀಟು ಕೇಳಿಲ್ಲ. ನಾವು ಕೇಳಿರೋದು 3-4 ಸೀಟು ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. 3-4 ಸೀಟು ಕೊಡ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳೋಕೆ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ? ಇಷ್ಟೆಲ್ಲಾ ಹೊಂದಾಣಿಕೆ ಬೇಕಾ ನನಗೆ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

Previous Post
21 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಇಂದು ರಾಜ್ಯ ಕಾಂಗ್ರೇಸ್‌ನ ಎರಡನೇ ಪಟ್ಟಿ ಬಿಡುಗಡೆ?
Next Post
CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

Recent News