ದೆಹಲಿ ಚಲೋ ಪ್ರತಿಭಟನೆಗೆ ಬೆದರಿದ ಕೇಂದ್ರ: ರೈತರ ಸಾಮಾಜಿಕ ಮಾದ್ಯಮ ಖಾತೆಗಳಿಗೆ ನಿರ್ಬಂಧ

ದೆಹಲಿ ಚಲೋ ಪ್ರತಿಭಟನೆಗೆ ಬೆದರಿದ ಕೇಂದ್ರ: ರೈತರ ಸಾಮಾಜಿಕ ಮಾದ್ಯಮ ಖಾತೆಗಳಿಗೆ ನಿರ್ಬಂಧ

ನವದೆಹಲಿ, ಮಾ. 6: ದೆಹಲಿ ಚಲೋ ಪ್ರತಿಭಟನೆ ಮತ್ತೆ ಪ್ರಾರಂಭವಾಗಿದ್ದು, ಇದಕ್ಕೂ ಮೊದಲೇ ರೈತರು ಮತ್ತು ರೈತ ಮುಖಂಡರಿಗೆ ಸೇರಿದ ನೂರಾರು ಸಾಮಾಜಿಕ ಮಾದ್ಯಮ ಖಾತೆಗಳಿಗೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡರು ಕೇಂದ್ರ ಸರಕಾರ ನಮ್ಮ ಪ್ರತಿಭಟನೆಗೆ ಬೆದರಿ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ‘ದೆಹಲಿ ಚಲೋ’ ಕರೆಗೆ ಒಂದು ದಿನ ಮೊದಲು, ಕೇಂದ್ರ ಸರ್ಕಾರ ರೈತ ಸಂಘದ ಮುಖಂಡರಿಗೆ ಮತ್ತು ರೈತರ ಪರವಾಗಿ ಪ್ರಚಾರಕ್ಕೆ ಸಂಬಂಧಿಸಿದ 100ಕ್ಕೂ ಅಧಿಕ ಎಕ್ಸ್ ಖಾತೆಗಳನ್ನು ತಡೆಹಿಡಿಯಲಾಗಿದೆ. MSP ಜಾರಿ, ಲಖಿಂಪುರ ಖೇರಿ ಪ್ರಕರಣದಲ್ಲಿ ನ್ಯಾಯ, ರೈತರ ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ರೈತರನ್ನು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು, ಖಾನೌರಿ ಮತ್ತು ದಬ್ವಾಲಿ ಗಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದರು. ಫೆಬ್ರವರಿ 13ರಂದು ದೆಹಲಿ ಚಲೋ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ ವಿಧಿಸಿರುವುದು ಇದು ಮೂರನೇ ಬಾರಿಯಾಗಿದೆ.
ಇದಕ್ಕೂ ಮೊದಲು, ಫೆಬ್ರವರಿ 12ರ ರಾತ್ರಿ ದೆಹಲಿ ಚಲೋ ಕರೆಗೆ ಒಂದು ದಿನ ಮುಂಚಿತವಾಗಿ ಸರ್ಕಾರವು ರೈತ ಸಂಘದ ಮುಖಂಡರಿಗೆ ಸೇರಿದ ಹನ್ನೆರಡು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ರೈತ ಸಂಘಗಳು ಮತ್ತು ಅವರ ಬೆಂಬಲಿಗರ ಅಧಿಕೃತ ಪೇಜ್‌ಗಳನ್ನು ತಡೆ ಹಿಡಿದಿತ್ತು. ಆ ಬಳಿಕ ಫೆಬ್ರವರಿ 21ರಂದು ದೆಹಲಿ ಚಲೋ ಕರೆ ಹಿನ್ನೆಲೆಯಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳು, ವಿಶೇಷವಾಗಿ ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿರುವ ಖಾತೆಗಳನ್ನು ಮತ್ತೆ ತಡೆ ಹಿಡಿಯಲಾಗಿತ್ತು. ರೈತ ಸಂಘದ ಮುಖಂಡರು ಮೋದಿ ಸರ್ಕಾರದ ಈ ನಡೆಯನ್ನು ಟೀಕಿಸಿದ್ದು, ರೈತರು ದೆಹಲಿ ಚಲೋ ತೆರಳಲು ಕರೆ ನೀಡಿದಾಗಲೆಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮತ್ತೆ ಮತ್ತೆ ನಿರ್ಬಂಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರೈತ ಸಂಘದ ಮುಖಂಡ ಗುರುಪ್ರೀತ್ ಸಂಘ ಅವರು ಮಾತನಾಡಿ, ಮಾರ್ಚ್ 6ರಂದು ದೆಹಲಿ ಚಲೋ ಕರೆ ನೀಡುವುದಕ್ಕಿಂತ ಎರಡು ದಿನಗಳ ಮೊದಲು ಮಾರ್ಚ್ 4ರಂದು ರೈತರು, ರೈತ ಸಂಘದ ಮುಖಂಡರು ಮತ್ತು ಪ್ರತಿಭಟನೆಯನ್ನು ಬೆಂಬಲಿಸುವ ಜನರಿಗೆ ಸೇರಿದ ಸುಮಾರು 100 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಸರ್ಕಾರವು ನನ್ನ ಮೂರು ಎಕ್ಸ್‌ ಖಾತೆಗಳನ್ನು ತಡೆಹಿಡಿದಿದೆ, ಒಂದು ಖಾತೆಯನ್ನು ನಿರ್ಬಂಧಿಸಿದ ನಂತರ ಮತ್ತೊಂದು ಖಾತೆಯನ್ನು ನಾನು ತೆರೆದಿದ್ದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ನಮ್ಮ ಕಾನೂನು ತಂಡವು ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ. ನಮ್ಮ ಧ್ವನಿಯು ಜನರಿಗೆ ತಲುಪಬಾರದು ಎಂಬುವುದು ಸರಕಾರದ ಗುರಿಯಾಗಿದೆ. ರೈತರನ್ನು ಮಾತನಾಡಲು ಬಿಡುವುದಿಲ್ಲ, ಸರ್ಕಾರವು ರೈತರ ಪ್ರತಿಭಟನೆಗೆ ಹೆದರುತ್ತಿದೆ, ಅದಕ್ಕಾಗಿ ಅವರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಹಮ್ಮಿಕೊಂಡಿರುವ ರೈತರು, ಇಂದು ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದಾರೆ. ಈ ಹಿನ್ನೆಲೆ ಪಂಜಾಬ್-ಹರಿಯಾಣ ಗಡಿಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ದೆಹಲಿ ಪೊಲೀಸ್‌ ಮುಖ್ಯಸ್ಥರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ರೈಲ್ವೆ ಮತ್ತು ಬಸ್‌ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ವಿವಿಧೆಡೆ ತಪಾಸಣೆ ತೀವ್ರಗೊಳಿಸಲಾಗಿದ್ದು, ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Previous Post
ಬಂಗಾಳದ ಮಾನಹಾನಿಗೆ, ತೃಣಮೂಲ ನಾಯಕರನ್ನು ಬಂಧಿಸಲು ಬಿಜೆಪಿ ಯತ್ನ: ಮಮತಾ
Next Post
ಸನಾತನ ಕುರಿತು ಟೀಕೆ; ಉದಯನಿಧಿ ಸ್ಟಾಲಿನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Recent News