ನವದೆಹಲಿ, ಏ. 20: ಚುನಾವಣಾ ಬಾಂಡ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ಧಾಳಿಯನ್ನು ನಡೆಸಿದ್ದು, ಮೋದಿ ದೇಶದಲ್ಲಿ ‘ಭ್ರಷ್ಟಾಚಾರದ ಶಾಲೆ’ಯನ್ನು ನಡೆಸುತ್ತಿದ್ದಾರೆ ಮತ್ತು ಸಂಪೂರ್ಣ ಭ್ರಷ್ಟಾಚಾರ ವಿಜ್ಞಾನ” ವಿಷಯದಲ್ಲಿ ಎಲ್ಲಾ ಅಧ್ಯಾಯಗಳನ್ನು ಕಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಎಕ್ಸ್’ನಲ್ಲಿ ಈ ಕುರಿತು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದು, ಚುನಾವಣಾ ಬಾಂಡ್‌ಗಳ ಕುರಿತು ಬಿಜೆಪಿಯನ್ನು ಟೀಕಿಸುವ ಹೊಸ ಜಾಹೀರಾತಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ದೇಶದಲ್ಲಿ ‘ಭ್ರಷ್ಟಾಚಾರದ ಶಾಲೆ’ ನಡೆಸುತ್ತಿದ್ದಾರೆ, ಅಲ್ಲಿ ಅವರು ‘ಇಡೀ ಭ್ರಷ್ಟಾಚಾರ ವಿಜ್ಞಾನ’ ವಿಷಯದ ಅಡಿಯಲ್ಲಿ ‘ಡೊನೇಶನ್ ವ್ಯವಹಾರ’ ಸೇರಿದಂತೆ ಎಲ್ಲಾ ಅಧ್ಯಾಯಗಳನ್ನು ವಿವರವಾಗಿ ಬೋಧಿಸುತ್ತಾರೆ ಎಂದು ಹೇಳಿದ್ದಾರೆ.
ದಾಳಿಗಳ ಮೂಲಕ ಡೊನೇಶನ್ ಸಂಗ್ರಹವನ್ನು ಹೇಗೆ ಮಾಡಲಾಗುತ್ತದೆ ಮತ್ತು ಡೊನೇಶನ್ ಪಡೆದ ನಂತರ ಹೇಗೆ ಕಾಂಟ್ರಾಕ್ಟ್‌ಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ಪ್ರಧಾನ ಮಂತ್ರಿ ಅಧ್ಯಾಯಗಳನ್ನು ಕಲಿಸುತ್ತಿದ್ದಾರೆ. ಭ್ರಷ್ಟರನ್ನು ತೊಳೆಯುವ ವಾಷಿಂಗ್ ಮೆಷಿನ್ ಹೇಗೆ ಕೆಲಸ ಮಾಡುತ್ತದೆ? ಏಜೆನ್ಸಿಗಳನ್ನು ರಿಕವರಿ ಏಜೆಂಟ್‌ಗಳನ್ನಾಗಿ ಮಾಡಿ ‘ಜಾಮೀನು ಮತ್ತು ಜೈಲು’ ಆಟ ಹೇಗೆ ಎಂದು ಕಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಭ್ರಷ್ಟರ ಗುಹೆ’ಯಾಗಿ ಮಾರ್ಪಟ್ಟಿರುವ ಬಿಜೆಪಿ ತನ್ನ ನಾಯಕರಿಗೆ ಈ ‘ಕ್ರ್ಯಾಶ್ ಕೋರ್ಸ್’ ಅನ್ನು ಕಡ್ಡಾಯಗೊಳಿಸಿದೆ ಮತ್ತು ಅದಕ್ಕೆ ದೇಶವೇ ಬೆಲೆ ತೆರುತ್ತಿದೆ. I.N.D.I.A. ಬ್ಲಾಕ್ ಸರ್ಕಾರವು ಈ “ಭ್ರಷ್ಟಾಚಾರದ ಶಾಲೆ” ಯನ್ನು ಮುಚ್ಚಲಿದೆ ಮತ್ತು ಈ ಕೋರ್ಸ್‌ನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇದೇ ಜಾಹೀರಾತನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ‘ಹಫ್ತಾ ವಸೂಲಿ’ ಸರ್ಕಾರವನ್ನು ಆಯ್ಕೆ ಮಾಡಬೇಡಿ, ಬದಲಾವಣೆಯನ್ನು ಆಯ್ಕೆ ಮಾಡಿಕೊಳ್ಳಿ, ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿ ತೀರ್ಪು ನೀಡಿತು. ಸುಪ್ರೀಂ ಕೋರ್ಟ್‌ನ ನಿರ್ದೇಶನದ ನಂತರ ಚುನಾವಣಾ ಬಾಂಡ್‌ಗಳ ಅಧಿಕೃತ ಮಾರಾಟಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಾರ್ವಜನಿಕಗೊಳಿಸಿತ್ತು. ಚುನಾವಣಾ ಬಾಂಡ್‌ಗಳ ದತ್ತಾಂಶವು ಬಿಜೆಪಿಯ ಕೊಡು ಕೊಳ್ಳುವಿಕೆ ಮತ್ತು ದೇಣಿಗೆಗೆ ಪ್ರತಿಯಾಗಿ ಕಂಪನಿಗಳಿಗೆ ‘ರಕ್ಷಣೆ’ಯಂತಹ ‘ಭ್ರಷ್ಟ ತಂತ್ರ’ಗಳನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.