ಮೊದಲ ಹಂತದ ಮತದಾನ, ಕೆಲವೆಡೆ ಹಿಂಸಚಾರ

ಮೊದಲ ಹಂತದ ಮತದಾನ, ಕೆಲವೆಡೆ ಹಿಂಸಚಾರ

ನವದೆಹಲಿ : ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಮಣಿಪುರ, ಪಶ್ಚಿಮ‌ ಬಂಗಾಳ, ಛತ್ತಿಸ್ಗಢ ಮತ್ತು ಅಸ್ಸಾಂನಲ್ಲಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಒಟ್ಟು ಶೇ.60 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ನಿರೀಕ್ಷೆಯಂತೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು, ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಸಮಯ ಕಳೆದಂತೆ ಮತಗಟ್ಟೆಯತ್ತ ಜನರು ಬರಲು ಆರಂಭಿಸಿದರು. ರಾಜಕೀಯ ಮುಖಂಡರು, ಸಿನಿಮಾ ತಾರೆಗಳು ಮತ ಚಲಾಯಿಸಿದರು. ಕಾಶ್ಮೀರದಲ್ಲಿ ನವ ದಂಪತಿಗಳು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. 77.57 ರಷ್ಟು ಮತದಾನವಾಗಿದೆ. ತಮಿಳುನಾಡಿನಲ್ಲಿ ಶೇ.70, ರಾಜಸ್ಥಾನದಲ್ಲಿ ಶೇ.50.3, ಉತ್ತರ ಪ್ರದೇಶದಲ್ಲಿ ಶೇ.57.5 ಮತ್ತು ಮಧ್ಯಪ್ರದೇಶದಲ್ಲಿ ಶೇ.63.3ರಷ್ಟು ಮತದಾನವಾಗಿದೆ. ಲೋಕಸಭಾ ಚುನಾವಣೆಯ ಜೊತೆಗೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕ್ರಮವಾಗಿ 67.5 ಮತ್ತು 64.7 ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆದಿದೆ. ರಾಜಸ್ಥಾನ (12), ಉತ್ತರ ಪ್ರದೇಶ (8), ಮಧ್ಯಪ್ರದೇಶ (6), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1) ), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1). ಅಲ್ಲದೆ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5, ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಮಣಿಪುರದಲ್ಲಿ ಎರಡು ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್‌ಗಢದಲ್ಲಿ ತಲಾ 1 ಸ್ಥಾನಗಳಲ್ಲಿ ಚುನಾವಣೆ ನಡೆದಿದೆ.

ಕಳೆದ ಕೆಲ ತಿಂಗಳ ಹಿಂದೆ ಭಾರೀ ಗಲಭೆ ನಡೆದು ವಿಶ್ವದಾದ್ಯಂತ ಸುದ್ದಿಯಾಗಿದ್ದ ಮಣಿಪುರದಲ್ಲಿ ಮೊದಲ ಹಂತದ ಮತದಾನದ ವೇಳೆಯೂ ಹಿಂಸಾಚಾರ ಘಟನೆ ಸಂಭವಿಸಿದೆ. ಪೂರ್ವ ಇಂಫಾಲ್‌ನ ಮತಗಟ್ಟೆಯೊಂದರಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿ ಸಹ ಕೂಡಲೇ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘಟನೆಯಿಂದ ಆತಂಕಗೊಂಡ ಮತದಾರರು ಸ್ಥಳದಿಂದ ಪಾರಾಗಲು ಏಕಾಏಕಿ ಎಲ್ಲೆಂದರಲ್ಲಿ ಓಡಿದ್ದಾರೆ. ಚುನಾವಣಾ ಆಯೋಗ ಶಾಂತಿಯುತ ಮತದಾನ ನಡೆಸಲು ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಸಹ ದುಷ್ಕರ್ಮಿಗಳು ಅಶಾಂತಿ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವೇಳೆ ಹಿಂಸಾಚಾರದ ಘಟನೆಗಳು ವರದಿಯಾಗಿದೆ. ಲೋಕಸಭೆಯ ಮೊದಲ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಕಲ್ಲು ತೂರಾಟ ನಡೆದ ಘಟನೆ ಬೆಳಕಿಗೆ ಬಂದಿದೆ. ಚಂದ್ಮರಿ ಮತ್ತು ಇತರ ಸ್ಥಳಗಳಲ್ಲಿ ದುಷ್ಕರ್ಮಿಗಳು ಇಟ್ಟಿಗೆಗಳನ್ನು ಎಸೆದು ಮತದಾರರನ್ನು ಬೆದರಿಸಿದ್ದಾರೆ. ಮತ್ತು ಮತದಾನ ಕೇಂದ್ರಗಳಿಗೆ ಹೋಗದಂತೆ ತಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೂಚ್‌ಬೆಹರ್‌ನ ದಿನ್‌ಹಟಾ ಗ್ರಾಮದಿಂದ ಬಾಂಬ್ ವಶಪಡಿಸಿಕೊಳ್ಳಲಾಗಿದ್ದು, ಈ ಭಾಗದ ಬಿಜೆಪಿ ಬೂತ್ ಅಧ್ಯಕ್ಷರ ಮನೆ ಮೇಲೆ ತೃಣಮೂಲ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಕೂಚ್‌ಬೆಹರ್‌ನ ಚಂದಮಾರಿ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಬಿಜೆಪಿ ಬೂತ್ ಅಧ್ಯಕ್ಷರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ತಮ್ಮ ಪಕ್ಷದ ಪೋಲಿಂಗ್ ಏಜೆಂಟ್ ಬಿಸ್ವನಾಥ್ ಪಾಲ್ ಅವರನ್ನು ಟಿಎಂಸಿ ಪಕ್ಷದ ಕಾರ್ಯಕರ್ತರು ಮತಗಟ್ಟೆಯಿಂದ ಅಪಹರಿಸಿದ್ದಾರೆ ಎಂದು ಬಂಗಾಳದ ಬಿಜೆಪಿ ಹೇಳಿಕೊಂಡಿದೆ.

ಛತ್ತೀಸ್‌ಗಢದಲ್ಲಿ, ಬಿಜಾಪುರದ ಗಲ್ಗಾಮ್ ಪ್ರದೇಶದ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿರುವ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವಾಗ ಬರೇಲ್ ಗ್ರೆನೇಡ್ ಲಾಂಚರ್ ಸೆಲ್ ಸ್ಫೋಟಗೊಂಡಿದೆ. ಈ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಸಮರ್ಪಕ ಕಾರ್ಯದಿಂದಾಗಿ ಅಸ್ಸಾಂನ ಐದು ಲೋಕಸಭಾ ಸ್ಥಾನಗಳಲ್ಲಿ ಒಟ್ಟು 150 ಸಂಪೂರ್ಣ ಎಲೆಕ್ಟ್ರಾನಿಕ್ ಮತಯಂತ್ರ ಸೆಟ್‌ಗಳನ್ನು ಬದಲಾಯಿಸಲಾಗಿದೆ. ವಿವಿಪ್ಯಾಟ್ ಮತ್ತು ವೈಯಕ್ತಿಕ ಇವಿಎಂಗಳ ಬ್ಯಾಲೆಟ್ ಯೂನಿಟ್‌ಗಳು ಸೇರಿದಂತೆ 400 ಕ್ಕೂ ಹೆಚ್ಚು ಸಾಧನಗಳನ್ನು ಬದಲಾಯಿಸಲಾಗಿದೆ. ನೈಜ ಮತದಾನಕ್ಕೂ ಮುನ್ನ 90 ನಿಮಿಷಗಳ ಮೊದಲು ಆರಂಭವಾದ ಅಣಕು ಮತದಾನದ ವೇಳೆ ಹೆಚ್ಚಿನ ಅಕ್ರಮಗಳು ಗಮನಕ್ಕೆ ಬಂದ ಹಿನ್ನಲೆ ಸಂಪೂರ್ಣ ಸೆಟ್‌ನೊಂದಿಗೆ ಬದಲಾಯಿಸಲಾಯಿತು. ಅದೇ ಸಮಯದಲ್ಲಿ, ವಿವಿಧ ಮತಗಟ್ಟೆಗಳಲ್ಲಿ ಇನ್ನೂ 40 VVPAT ಗಳನ್ನು ಬದಲಾಯಿಸಲಾಯಿತು.

Previous Post
ಸಕ್ಕರೆ ಅಂಶ ಹೆಚ್ಚಿಸಿಕೊಳ್ಳಲು ಮಾವು ಸೇವನೆ – ಇಡಿ ಆರೋಪಕ್ಕೆ ತಿರುಗೇಟು ನೀಡಿದ ಕೇಜ್ರಿವಾಲ್
Next Post
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶೇ 43% ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ

Recent News