ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ ಬಿಜೆಪಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು, ಮಾರ್ಚ್ 30: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಪ್ರಚಾರದಲ್ಲಿ ಪರ ವಿರೋಧ ಚರ್ಚೆಗಳು, ಭಾಷಣಗಳು ಕೇಳಿ ಬರುತ್ತಲೇ ಇದೆ. ಬಿಜೆಪಿಗರು ಕಾಂಗ್ರೆಸ್ ಮೇಲೆ, ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಾರೆ ಎಂದು ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಷ್ಟೇ ಅಲ್ಲದೆ, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಾರ್ಚ್ 29ರ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

“ಇದು ನಮ್ಮ ನಾಯಕರ ಮೇಲಿನ ವೈಯಕ್ತಿಕ ದಾಳಿ. ಯತೀಂದ್ರ ಸಿದ್ದರಾಮಯ್ಯ ಅವರು ಖಂಡನೀಯ ಹೇಳಿಕೆ ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಡೆದ ವೈಯಕ್ತಿಕ ದಾಳಿ” ಎಂದು ಬಿಜೆಪಿ ಪತ್ರದಲ್ಲಿ ಉಲ್ಲೇಖಿಸಿದೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ ಅವರು, ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ, ರೌಡಿ, ಗುಜರಾತ್‌ನಲ್ಲಿ ಅವರ ಮೇಲೆ ಕೊಲೆ ಆರೋಪವಿದೆ. ಅವರನ್ನು ಗಡಿಪಾರು ಮಾಡಲಾಗಿದ್ದು, ಅಂತಹವರನ್ನು ಮುಂದಿಟ್ಟುಕೊಂಡು ಮೋದಿ ರಾಜಕೀಯ ಮಾಡಿದ್ದಾರೆ” ಎಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ನಾಯಕರು ಹೇಳಿಕೆಯನ್ನು ಖಂಡಿಸಿದ್ದು, ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಪುತ್ರನಾಗಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ, ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ “ನಮ್ಮ ಹಿರಿಯ ನಾಯಕರಾದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ರವರ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಖಂಡನಾರ್ಹ ಮಾತ್ರವಲ್ಲ, ತೀರಾ ಕೀಳು ಮಟ್ಟದ್ದಾಗಿದೆ. ಒಬ್ಬ ಮಾಜಿ ಶಾಸಕರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮಗನಾಗಿ ಕನಿಷ್ಠ ಘನತೆಯನ್ನೂ ಕೂಡ ಅವರು ಮರೆತಂತಿದೆ” ಎಂದಿದ್ದರು. “ಮೈಸೂರು ಹಾಗೂ ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಚ್ಚಳವಾಗಿದ್ದು, ಹತಾಶೆಯಿಂದ ಯತೀಂದ್ರ ಅವಹೇಳನಕಾರಿ ಪದ ಪ್ರಯೋಗಕ್ಕೆ ಮುಂದಾಗಿದ್ದಾರೆ. ದೇಶದ ಗೃಹ ಸಚಿವರ ಕುರಿತಾದ ಅವರ ಕೀಳು ಮಟ್ಟದ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಅವರು ಕೂಡಲೇ ಕ್ಷಮೆ ಕೇಳಬೇಕು. ಇನ್ನು ಮುಂದಾದರೂ ಸಾರ್ವಜನಿಕ ಜೀವನದಲ್ಲಿ ಸಭ್ಯತೆಯಿಂದ ವರ್ತಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ” ಎಂದು ಟೀಕಿಸಿದ್ದರು.

Previous Post
ಅರವಿಂದ್ ಕೇಜ್ರಿವಾಲ್ ವಿರುದ್ದ ಮತ್ತೊಂದು ಪಿಐಎಲ್‌; ಸಿಎಂ ಸ್ಥಾನ ಅಪಾಯದಲ್ಲಿ?
Next Post
ಬಿಜೆಪಿಗೆ ‘ಸೈನಿಕ’ನ ಶಾಕ್, ಮುನಿಯಪ್ಪ ಮುನಿಸಿಗೆ ಮದ್ದು

Recent News