ರಾಜ್ಯಸಭಾ ಚುನಾವಣೆಗೆ ಅಜಿತ್ ಪವಾರ್ ಪತ್ನಿ ಸುನೇತ್ರಾ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆಗೆ ಅಜಿತ್ ಪವಾರ್ ಪತ್ನಿ ಸುನೇತ್ರಾ ನಾಮಪತ್ರ ಸಲ್ಲಿಕೆ

ಮುಂಬೈ, ಜೂ. 14: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ರಾಜ್ಯಸಭಾ ಚುನಾವಣೆಗೆ ಎನ್‌ಸಿಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರು ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ನಾದಿನಿ ಸುಪ್ರಿಯಾ ಸುಳೆ ವಿರುದ್ಧ ಸೋಲನ್ನು ಕಂಡಿದ್ದರು. ರಾಜ್ಯ ಸಭಾ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಲು ಎನ್‌ಸಿಪಿ ನಿರ್ಧರಿಸಿದೆ. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ. ಆದರೆ, ಪಕ್ಷದ ನಾಯಕರು ಅವರ ಹೆಸರನ್ನು ಅಂತಿಮಗೊಳಿಸಿದರು ಎಂದು ರಾಜ್ಯ ಸಚಿವ ಹಾಗೂ ಎನ್‌ಸಿಪಿಯ ಹಿರಿಯ ನಾಯಕ ಛಗನ್ ಬುಜಬಲ್ ಹೇಳಿದ್ದಾರೆ.
ಭುಜಬಲ್ ಅವರು ರಾಜ್ಯಸಭಾ ಸ್ಥಾನಕ್ಕೆ ಆಕಾಂಕ್ಷಿತ ಎಂದು ಹೇಳಿಕೊಂಡಿದ್ದರು. ಸುನೇತ್ರಾ ಪವಾರ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಲು ಪಕ್ಷದ ಕೋರ್ ಗ್ರೂಪ್ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ನಾನು ಸೇರಿದಂತೆ ಹಲವಾರು ಜನರು ಈ ಸ್ಥಾನವನ್ನು ಬಯಸಿದ್ದರು ಆದರೆ ಚರ್ಚೆಯ ನಂತರ ನಾವು ಸುನೇತ್ರಾ ಪವಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂದು ನಿರ್ಧರಿಸಿದ್ದೇವೆ. ಈ ನಿರ್ಧಾರದಿಂದ ನಾನು ಸ್ವಲ್ಪವೂ ಅಸಮಾಧಾನಗೊಂಡಿಲ್ಲ. ನಾವು ಪಕ್ಷಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಎನ್‌ಸಿಪಿ ನಾಯಕರ ನಡೆಯಿಂದ ನಿರಾಶೆಗೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಭುಜಬಲ್, ನೀವು ಅದನ್ನು ನನ್ನ ಮುಖದಲ್ಲಿ ನೋಡುತ್ತೀರಾ? ಪಕ್ಷದಲ್ಲಿ ಕೆಲಸ ಮಾಡುವಾಗ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಪಕ್ಷದ ಹಿತಾಸಕ್ತಿ ಮುಖ್ಯ ಎಂದು ಹೇಳಿದ್ದಾರೆ. ಸುನೇತ್ರಾ ಅವರು ನಾಮಪತ್ರ ಸಲ್ಲಿಸುವಾಗ ಎಲ್ಲಾ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರು ಸೇರಿಕೊಂಡಿದ್ದರಿಂದ ಒಗ್ಗಟ್ಟು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಫುಲ್ ಪಟೇಲ್ ಅವರಿಂದ ತೆರವಾದ ಸ್ಥಾನಕ್ಕೆ ಜೂ.25ರಂದು ಉಪಚುನಾವಣೆ ನಡೆಯುತ್ತಿದೆ.

Previous Post
ಬಿ.ಎಸ್​​​​ ಯಡಿಯೂರಪ್ಪ ವಿರುದ್ಧ ಅರೆಸ್ಟ್​​​​ ವಾರಂಟ್​​ ಜಾರಿ
Next Post
‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ

Recent News