ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಆರೋಪಿಯ ಬಂಧನ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಆರೋಪಿಯ ಬಂಧನ

ಕೊಲ್ಕತ್ತಾ/ ನವದೆಹಲಿ : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿ ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ಎನ್‍ಐಎ ಅಧಿಕಾರಿಗಳ ಬಂಧಿಸಿದ್ದಾರೆ. ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ ಪ್ರಮುಖ ಆರೋಪಿ ಬಾಂಬರ್ ಮುಸಾವೀರ್ ಮತ್ತು ಆತನ ಜೊತೆಗೆ ಅಡಗಿದ್ದ ಅಬ್ದುಲ್ ಮತೀನ್ ನನ್ನು ಅರೆಸ್ಟ್ ಮಾಡಲಾಗಿದೆ. ಅಬ್ದುಲ್ ಮತೀನ್, ಮುಸಾವೀರ್ ಗೆ ಸಂಚು ನಡೆಸಲು ನೆರವು ನೀಡಿದ್ದ ಎಂದು ಎನ್‌ಐಎ ಆರೋಪಿಸಿದೆ.

ಯಾರಿಗೂ ಗುರುತು ಸಿಗದಂತೆ ತಲೆಮರೆಸಿಕೊಂಡಿದ್ದ ಇವರಿಬ್ಬರು ನಕಲಿ ದಾಖಲೆ ನೀಡಿ ಕೋಲ್ಕತ್ತಾದಲ್ಲಿ ವಾಸ್ತವ್ಯ ಹೂಡಿದ್ದರು. ಮನೆಯಲ್ಲಿ ವಾಸ್ತವ್ಯ ಮುನ್ನ ಚೀಪ್ ರೇಟ್ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಖಚಿತ ಮಾಹಿತಿಯನ್ನಾಧರಿಸಿ ಎನ್‍ಐಎ ಟೀಂ ನಸುಕಿನ ಜಾವ 2.30 ರ ವೇಳೆಗೆ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೋಡ್‌ವರ್ಡ್‌ ಸಹಾಯ

ಆರೋಪಿಗಳನ್ನು ಕೋಡ್‌ವರ್ಡ್‌ ಸಹಾಯದಿಂದ ಬಂಧಿಸಲಾಗಿದೆ. ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್‌ ಮುನೀರ್‌ನನ್ನು ಎನ್‌ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಮುನೀರ್ ಸೆಲ್ ಮೇಲೆ ದಾಳಿ ಮಾಡಿದಾಗ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್‌ ಪರಿಶೀಲಿಸಿದಾಗ ಹಲವು ಕೋಡ್‌ ವರ್ಡ್‌ ಸಿಕ್ಕಿದ್ದವು. ಈ ಕೋಡ್‌ ವರ್ಡ್‌ ಡಿಕೋಡ್‌ ಮಾಡಿದಾಗ ಆರೋಪಿಗಳ ಮಾಹಿತಿ ಲಭ್ಯವಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಮಾಝ್‌ ಮುನೀರ್‌ ಸೂತ್ರಧಾರ?

ಮಾಝ್‌ ಮುನೀರ್‌ನನ್ನು ಎನ್‌ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ್‌ ಮುನೀರ್‌ ಸೂತ್ರಧಾರನಾಗಿದ್ದು ಆತನನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರುವ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಬಾಕ್ಸ್

ರಾಜಕೀಯ ತಿರುವು, ಆರೋಪ ಪ್ರತ್ಯಾರೋಪ

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ ರಾಜಕೀಯ ತಿರುವು ಪಡೆದುಕೊಂಡಿದೆ. ಆರೋಪಿಗಳ ಬಂಧನದ ಬೆನ್ನಲೆ ಟ್ವಿಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ವರ್ಗವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಮಿತ್ ಮಾಳವಿಯ ಟೀಕೆಗೆ ಪಶ್ಚಿಮ ಬಂಗಾಳ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿಲ್ಲ. ರಾಜ್ಯ ಪೊಲೀಸರು ತನ್ನ ಜನರನ್ನು ಕೆಟ್ಟ ಚಟುವಟಿಕೆಗಳಿಂದ ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಅಸತ್ಯವು ಅತ್ಯಂತ ಕೆಟ್ಟದಾಗಿದೆ. ಆರೋಪಿಗಳ ಬಂಧನಕ್ಕೆ ಬಂಗಾಳ ಪೊಲೀಸರೂ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪುರ್ಬಾ ಮೇದಿನಿಪುರದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಬಿಜೆಪಿಯ ಆರೋಪಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ಕೂಚ್‌ಬೆಹಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ ಜನರು ಬಂಗಾಳ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿ ಸುರಕ್ಷಿತವಾಗಿದೆಯೇ? ಅವರು ಏನು ಕೆಲಸ ಮಾಡಿದ್ದಾರೆಂದು ಅವರನ್ನು ಕೇಳಿ ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

Previous Post
ಕಾರ್ಯತಂತ್ರದ ಭಾಗವಾಗಿ ನನ್ನನ್ನು ಕಾಂಗ್ರೆಸ್‌ಗೆ ಕಳುಹಿಸಿದ್ದರು: ಮಧ್ಯಪ್ರದೇಶ ಬಿಜೆಪಿ ನಾಯಕನ ಹೇಳಿಕೆ
Next Post
ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನ ಬಿಜೆಪಿ ವಿರುದ್ಧ ಆಪ್ ನಾಯಕರ ಗಂಭೀರ ಆರೋಪ

Recent News