1 ರಾಷ್ಟ್ರ, 1 ಚುನಾವಣೆ ಕಲ್ಪನೆ ‘ಪ್ರಜಾಪ್ರಭುತ್ವ ವಿರೋಧಿ’: ಸಿಪಿಐ(ಎಂ)

1 ರಾಷ್ಟ್ರ, 1 ಚುನಾವಣೆ ಕಲ್ಪನೆ ‘ಪ್ರಜಾಪ್ರಭುತ್ವ ವಿರೋಧಿ’: ಸಿಪಿಐ(ಎಂ)

ನವದೆಹಲಿ, ಜ.‌ 8: ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಪತ್ರ ಬರೆದಿದ್ದು, ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತ ಪ್ರಸ್ತಾವನೆಯು ‘ಪ್ರಜಾಪ್ರಭುತ್ವ ವಿರೋಧಿ’ ಮತ್ತು ಸಂವಿಧಾನದ ಪ್ರಕಾರ ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.

ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತ ಉನ್ನತ ಮಟ್ಟದ ಸಮಿತಿಗೆ ಅವರು ಬರೆದ ಪತ್ರದಲ್ಲಿ, ಸಮಿತಿಗೆ ಸಿಪಿಐ(ಎಂ) ವಿರೋಧವನ್ನು ವ್ಯಕ್ತಪಡಿಸಿದ್ದು, ಸಮಿತಿಯ ಕಾರ್ಯಸೂಚಿ ಮತ್ತು ಉದ್ದೇಶವು ಪೂರ್ವ ನಿರ್ಧಾರಿತವಾಗಿದೆ. ಸಿಪಿಐ(ಎಂ) ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಾಗಿನಿಂದಲೂ ತನ್ನ ವಿರೋಧ ವ್ಯಕ್ತಪಡಿಸಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸುತ್ತಿರುವುದಕ್ಕೆ ಪಕ್ಷದ ಬಲವಾದ ಆಕ್ಷೇಪಣೆಯನ್ನು ಉಲ್ಲೇಖಿಸಿದ ಅವರು, ಪ್ರಸ್ತಾವನೆಯು ಸಂವಿಧಾನದ ತತ್ವಗಳು ಮತ್ತು ಆತ್ಮಕ್ಕೆ ವಿರುದ್ಧವಾಗಿದೆ ಎಂದು ಯೆಚೂರಿ ಹೇಳಿದ್ದಾರೆ.

ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿದ ಅವರು, ಚುನಾಯಿತ ಪ್ರತಿನಿಧಿಗಳು ಜನರಿಗೆ ಮತ್ತು ಕಾರ್ಯಾಂಗಕ್ಕೆ ಹೊಣೆಗಾರರಾಗಿದ್ದಾರೆ ಅಥವಾ ಚುನಾವಣೆಯ ಪರಿಣಾಮವಾಗಿ ಅಧಿಕಾರ ವಹಿಸಿಕೊಳ್ಳುವ ಸರ್ಕಾರವು ಶಾಸಕಾಂಗಕ್ಕೆ ಜವಾಬ್ದಾರರಾಗಿರುತ್ತಾರೆ. ನಮ್ಮ ಸಂವಿಧಾನದ ಈ ಅಂಶಗಳನ್ನು ತಿರುಚಲಾಗುವುದಿಲ್ಲ, ದುರ್ಬಲಗೊಳಿಸುವುದನ್ನು ಬಿಟ್ಟುಬಿಡುವುದಿಲ್ಲ ಎಂದು ನಾವು ನಂಬುತ್ತೇವೆ. ಅಂತಹ ಪ್ರಸ್ತಾಪವು ಅಂತರ್ಗತವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ನಮ್ಮ ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ ಅವರು, 2018ರಲ್ಲಿ ಕಾನೂನು ಆಯೋಗಕ್ಕೆ ಸಲ್ಲಿಸಿದ ಟಿಪ್ಪಣಿಯನ್ನು ಉಲ್ಲೇಖಿಸಿದ್ದಾರೆ.

ಸಮಿತಿಯ ಅಕ್ಟೋಬರ್ 18, 2023ರ ಪತ್ರವು ಏಕಕಾಲದಲ್ಲಿ ಚುನಾವಣೆಗಳನ್ನು ಆಯೋಜಿಸಲು ಸೂಕ್ತವಾದ ಕಾನೂನು ತಿದ್ದುಪಡಿ ಮತ್ತು ಆಡಳಿತಾತ್ಮಕ ಚೌಕಟ್ಟನ್ನು ನಿರ್ಮಿಸಲು ಶಿಫಾರಸುಗಳನ್ನು ಮಾಡುವುದು ಸಮಿತಿಯ ಕಾರ್ಯವಾಗಿದೆ ಎಂದು ಹೇಳಿದೆ. ಇದರಿಂದ ಏಕಕಾಲಿಕ ಚುನಾವಣೆಯ ಬಗ್ಗೆ ನಿರ್ಧಾರವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಮತ್ತು ಈಗ ಅದರ ಅನುಷ್ಠಾನದ ಪ್ರಶ್ನೆಯಾಗಿದೆ ಎಂಬುವುದು ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಸಂವಿಧಾನದ ಅಡಿಯಲ್ಲಿ, ಒಂದು ಸರ್ಕಾರವು ಅವಿಶ್ವಾಸ ನಿರ್ಣಯದ ವೇಳೆ ಶಾಸಕಾಂಗದ ವಿಶ್ವಾಸವನ್ನು ಕಳೆದುಕೊಂಡರೆ ರಾಜೀನಾಮೆ ನೀಡಬೇಕು. ಪರ್ಯಾಯ ಸರ್ಕಾರ ರಚಿಸಲಾಗದಿದ್ದರೆ, ಸದನವನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಬೇಕಿದೆ. ಲೋಕಸಭೆ ಅಥವಾ ಶಾಸಕಾಂಗದ ಜೀವಿತಾವಧಿಯನ್ನು ವಿಸ್ತರಿಸುವ ಯಾವುದೇ ಪ್ರಯತ್ನವು ಸಂವಿಧಾನ ವಿರೋಧಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವಿರೋಧಿಯೂ ಆಗಿರುತ್ತದೆ ಎಂದು ಸಿಪಿಐ(ಎಂ) ಹೇಳಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸಂವಿಧಾನದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕುರಿತು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲು ಮಾಜಿ ರಾಷ್ಟ್ರಪತಿ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಂವಿಧಾನ, ಜನಪ್ರತಿನಿಧಿ ಕಾಯಿದೆ-1950 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು ಮತ್ತು ಇತರ ಕಾನೂನುಗಳಿಗೆ ನಿರ್ದಿಷ್ಟ ತಿದ್ದುಪಡಿಗಳನ್ನು ಪರಿಶೀಲಿಸಲು ಮತ್ತು ತಿದ್ದುಪಡಿ ಕುರಿತ ಶಿಫಾರಸ್ಸಿಗೆ ಸಮಿತಿ ರಚಿಸಲಾಗಿದೆ.

ಸೆ.1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ಜೊತೆ ನಡೆಸಿದ ಸಭೆಯ ಬಳಿಕ ಏಕಕಾಲದಲ್ಲಿ ಸಂಸತ್ತಿಗೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಪರಿಶೀಲಿಸಲು ಕೋವಿಂದ್ ಅವರ ನೇತೃತ್ವದ ಸಮಿತಿ ರಚಿಸಿದ್ದರು.

ಸರ್ಕಾರದ ಸೆ.1ರ ಅಧಿಸೂಚನೆಯಲ್ಲಿ ಕೋವಿಂದ್ ಅವರನ್ನು ಹೊರತುಪಡಿಸಿ, ಸಮಿತಿಯಲ್ಲಿ ಅಮಿತ್‌ ಶಾ, ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಹಿರಿಯ ವಕೀಲ ಹರೀಶ್ ಸಾಳ್ವೆ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಇತರ ಸದಸ್ಯರಾಗಿದ್ದರು. ಅಧೀರ್ ರಂಜನ್ ಚೌದರಿ ಸಮಿತಿಯ ಭಾಗವಾಗಲು ನಿರಾಕರಿಸಿದ್ದರು.

Previous Post
ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಪುನಃ ಜೈಲು: ತೀರ್ಪು ಸ್ವಾಗತಿಸಿದ ಪ್ರತಿಪಕ್ಷಗಳು
Next Post
INDIA ಬ್ಲಾಕ್ ನಲ್ಲಿ ಬಿರುಕು, ಕಾಂಗ್ರೆಸಿನಲ್ಲಿ ಚುರುಕು

Recent News