10 ಲಕ್ಷ ಲೋನ್‌ಗೆ 5 ಲಕ್ಷ ಸಬ್ಸಿಡಿ: RBI ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಮಹಿಳೆ

10 ಲಕ್ಷ ಲೋನ್‌ಗೆ 5 ಲಕ್ಷ ಸಬ್ಸಿಡಿ: RBI ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಮಹಿಳೆ

ಬೆಂಗಳೂರು, ಫೆಬ್ರವರಿ 09: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಸರಿನಲ್ಲಿ ತಮಿಳುನಾಡು ಮೂಲದ ಮಹಿಳೆಯೊಬ್ಬರು ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪವಿತ್ರ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ಸೇರಿದಂತೆ ವಂಚನೆ ಮಾಡಿದ ಒಟ್ಟು ಹದಿನಾಲ್ಕು ಮಂದಿಯ ವಿರುದ್ಧ ಸೂರ್ಯ ನಗರ ಮತ್ತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಆರೋಪಿ ಪವಿತ್ರಾ ತಮಿಳುನಾಡಿನ ಹೊಸೂರು ಮೂಲದವರಾಗಿದ್ದು, ‘ಬ್ಲೂ ವಿಂಗ್ಸ್’ ಹೆಸರಿನ ಟ್ರಸ್ಟ್ ನಡೆಸುತ್ತಿದ್ದಾಳೆ. ಆರೋಪಿಗಳು ಬೆಂಗಳೂರಿನ ಹೊರವಲಯದಲ್ಲಿರುವ ಅತ್ತಿಬೆಲೆ, ಹೊಸೂರು, ಧರ್ಮಪುರಿ ಮತ್ತು ಕರ್ನಾಟಕ ಮತ್ತು ತಮಿಳುನಾಡಿನ ಹಲವಾರು ಗಡಿ ಗ್ರಾಮಗಳ ಹಲವಾರು ಗ್ರಾಮಸ್ಥರನ್ನು ಭೇಟಿ ಮಾಡಿದ್ದಾಳೆ. ಈ ಭಾಗದ ಜನರಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ. ಟ್ರಸ್​​ಗೆ ಆರ್​ಬಿಐನಿಂದ 17 ಕೋಟಿ ರೂಪಾಯಿ ಬಂದಿರುವುದಾಗಿ ಹಾಗೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಹಲವು ಕಡೆಗಳಲ್ಲಿ ನೂರಾರು ಜನರನ್ನು ನಂಬಿಸಿದ್ದಾಳೆ. ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ಮರುಳು ಮಾಡಿದ ಪವಿತ್ರಾ, ಒಬ್ಬರಿಗೆ 10 ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ನಂಬಿಸಿದ್ದಳು. ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕೆಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಜನರು ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಯಾರೊಬ್ಬರೂ ಸಾಲ ಪಡೆಯದೇ ಇದ್ದಾಗ ಜನರಲ್ಲಿ ಅನುಮಾನ ಮೂಡಿದ್ದು, ಆರೋಪಿಗಳ ಗುಂಪು ಜನರನ್ನು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಾವು ವಂಚನೆಗೊಳಾಗಿರಬಹುದು ಎಂದು ಅನುಮಾನಗೊಂಡ ಜನರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪೊಲೀಸರು ಪವಿತ್ರಾ ಹಾಗೂ ಇತರ 13 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಮುಖ ಆರೋಪಿ ಪವಿತ್ರಾ ತಲೆ ಮರೆಸಿಕೊಂಡಿದ್ದರು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಜೊತೆಗೆ ಕೋಟ್ಯಂತರ ರೂಪಾಯಿ ನಗದನ್ನು ಒಂದೇ ಕಡೆ ಇಟ್ಟಿರುವ ವಿಡಿಯೋ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Previous Post
6 ಮಂದಿ ಸಾವು, 250 ಜನರಿಗೆ ಗಾಯ- ಕರ್ಫ್ಯೂ ಜಾರಿ, ಶಾಲೆಗಳು ಬಂದ್!
Next Post
ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿಯಾದ ವಿಜಯೇಂದ್ರ

Recent News