15 ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

15 ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

ತಮಿಳುನಾಡು, ಫೆಬ್ರವರಿ, 07: ದೇಶದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಈಗಿನಿಂದಲೇ ಕಾಂಗ್ರಸ್‌, ಬಿಜೆಪಿಯಿಂದ ತೀವ್ರ ಕಸರತ್ತು ನಡೆಯುತ್ತಿದೆ. ಅದರಲ್ಲೂ ಬೇರೆ ಪಕ್ಷಗಳ ನಾಯಕರನ್ನು ಮತ್ತೊಂದು ತಮ್ಮ ತಮ್ಮ ಪಾರ್ಟಿಗೆ ಸೆಳೆಯುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಅದರಲ್ಲೂ ಬಿಜೆಪಿ ಕಡೆಗೆ ವಾಲುವವರ ಸಂಖ್ಯೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಇದೀಗ ಬುಧವಾರ ನವದೆಹಲಿಯಲ್ಲಿ (ಫೆಬ್ರವರಿ 07) ತಮಿಳುನಾಡಿನ 15 ಮಾಜಿ ಶಾಸಕರು ಮತ್ತು ಮಾಜಿ ಸಂಸದರು ಸೇರಿದಂತೆ ಹಲವಾರು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. ಇದರಿಂದ ಕಮಲಕ್ಕೆ ಕಳೆ ಬಂದಂತಾಗಿದೆ.

ಇವರಲ್ಲಿ ಹೆಚ್ಚಿನ ನಾಯಕರು ರಾಜ್ಯದಲ್ಲಿ ಬಿಜೆಪಿಯ ಮಾಜಿ ಮಿತ್ರಪಕ್ಷವಾದ ಎಐಎಡಿಎಂಕೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ವೇಳೆ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಸೇರಿದಂತೆ ಮತ್ತಿತರರ ಬಿಜೆಪಿ ನಾಯಕರ ಸಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇನ್ನು ಈ ಪಕ್ಷ ಸೇಪ್ರಡೆಯ ವಿಡಿಯೋವನ್ನು ರಾಜೀವ್ ಚಂದ್ರಶೇಖರ್ ಅವರು ತಮ್ಮ ಟ್ವಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಪಕ್ಷಕ್ಕೆ ಬಂದವರನ್ನು ಸ್ವಾಗತಿಸಿದ ಅಣ್ಣಾಮಲೈ, ಅವರು ಬಿಜೆಪಿಗೆ ಅನುಭವದ ಸಂಪತ್ತು ತಂದಿದ್ದಾರೆ. ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಅವರು ಬಯಸಿದ್ದಾರೆ ಎಂದು ಹೇಳಿದರು. ತಮಿಳುನಾಡು ಈಗ ಬಿಜೆಪಿ ಕಡೆಗೆ ವಾಲುತ್ತಿದೆ. ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಈ ಬಗ್ಗೆ ಮಾತನಾಡಿದ ರಾಜೀವ್ ಚಂದ್ರಶೇಖರ್ ಅವರು, ಬಿಜೆಪಿ ಅಷ್ಟೇನೂ ಪ್ರಮುಖ ಪಕ್ಷವಾಗಿ ಬೆಳೆಯಲು ಸಾಧ್ಯವಾಗಿರದ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಪ್ರತಿಫಲನವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸೀಟುಗಳನ್ನು ಮತ್ತು ಎನ್‌ಡಿಎ ಮೈತ್ರಿಕೂಟ 400 ಸೀಟುಗಳ ಗಡಿ ದಾಟುವುದನ್ನು ಪ್ರಧಾನಿ ನರೇಂದ್ರ ಮೋದಿ ಅಂದಾಜಿಸಿದ್ದಾರೆ. ಇದರಲ್ಲಿ ಅನೇಕ ಹೊಸ ಸೀಟುಗಳು ತಮಿಳುನಾಡಿನಿಂದ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಇದೇ ವೇಳೆ ಅವರು, ಕಳೆದ 10 ವರ್ಷಗಳ ಪರಿವರ್ತನೆಯು ಮುಂದುವರಿಯಬೇಕೆಂದು ಭಾರತದ ಪ್ರತಿಯೊಬ್ಬ ನಾಗರಿಕನು ಬಯಸುತ್ತಾನೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

Previous Post
ನಾಳೆ ವಿಧಾನಸೌಧದ ಮೆಟ್ಟಿಲುಗಳ ಬಳಿ ನಡೆಯಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದೆ.
Next Post
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಿರಿಯ ನಾಯಕರ ಮೇಲೆ ಕಾಂಗ್ರೆಸ್ ಒತ್ತಡ!

Recent News