233 ಗ್ರಾಮ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ

233 ಗ್ರಾಮ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ

ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಗ್ರಾಮಗಳ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.ಮಹಾತ್ಮಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯದಂತೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗುತ್ತದೆ ಎಂದು ತಿಳಿಸಿದರು

ಬೆಂಗಳೂರು : ಗ್ರಾಮಗಳ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಕ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ 2023 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ಮಹಾತ್ಮಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯದಂತೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗುತ್ತದೆ. ಮಹಾತ್ಮ ಗಾಂಧಿ ಅವರ ಕನಸಿನ ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ದಿ. ರಾಜೀವ್ ಗಾಂಧಿ ಎಂದು ಹೇಳಿದರು.ಅಧಿಕಾರ ವಿಕೇಂದ್ರಕರಣ ಗಾಂಧಿಯವರ ಕನಸಾಗಿತ್ತು. ಇದರಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿದ್ದರು. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸಿದರು. ಗ್ರಾಮಗಳ ಅಭಿವೃದ್ದಿ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಗಾಂಧೀಜಿಯವರ ನೀತಿಯಾಗಿತ್ತು ಎಂದು ವಿವರಿಸಿದರು.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಆಶಯದಂತೆ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದರು. ಜನತಂತ್ರದ ವಿಕೇಂದ್ರೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಜೀವ್ ಗಾಂಧಿ ಮತ್ತು ಇದನ್ನು ಜಾರಿ ಮಾಡಿದವರು ಮಾಜಿ ಪ್ರಧಾನಿ ನರಸಿಂಹರಾವ್ ಎಂದು ಸಿದ್ದರಾಮಯ್ಯ ತಿಳಿಸಿದರು. ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದೀವಿ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯರ ಲೋಕಸಭೆ, ವಿಧಾನಸಭೆಗಳಲ್ಲಿ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್. ಈಗ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.ಖಾದಿ-ಗ್ರಾಮೋದ್ಯೋಗ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಗಾಂಧೀಜಿಯವರಂತೆ ಬದುಕಲು ಸಾಧ್ಯವಿಲ್ಲ. ಆದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಸೇರಿ ಹಲವು ಮುಖಂಡರು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯಾಂಶಗಳು :

– 31 ಜಿಲ್ಲೆಗಳ 233 ಗ್ರಾಮ ಪಂಚಾಯಿತಿಗಳಿಗೆ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

– ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ತಲಾ ಎರಡು ಗ್ರಾ.ಪಂ.ಗಳಿಗೆ 2022-23ನೇ ಸಾಲಿನ ವಿಶೇಷ ಗಾಂಧಿ ಗ್ರಾಮ ಪುರಸ್ಕಾರವಾಗಿ ಪ್ರಶಸ್ತಿ ಪತ್ರ ಮತ್ತು ಫಲಕ ಪ್ರದಾನ

– ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023ರಡಿ ಆಯ್ಕೆಯಾದ 25 ಗ್ರಾಮ ಪಂಚಾಯಿತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

– ಡೆಲ್ ಟೆಕ್ನಾಲಜೀಸ್ ಮತ್ತು ಐಎಲ್ ಪಿ ಸಂಸ್ಥೆಯಿಂದ ತುಮಕೂರು ತಾಲೂಕಿನ 39 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಿಗೆ ವೃತ್ತಿ ಮಾರ್ಗದರ್ಶನ ಮಾಹಿತಿಯುಳ್ಳ ಚಾರ್ಟ್ ವಿತರಣೆ

– ಗ್ರಾ.ಪಂ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಟಲ್ ಜಿ ಸ್ನೇಹ ಕೇಂದ್ರಗಳ 44 ಸೇವೆಗಳು ವಿಲೇವಾರಿ. ಇನ್ನು ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ ಇತ್ಯಾದಿ ಪ್ರಮುಖ ಸೇವೆಗಳು ಲಭ್ಯ.

– ಗ್ರಾಮ ಡಿಜಿ ವಿಕಸನ 2023-24ರ ಕಾರ್ಯಕ್ರಮದಡಿ ಆಯ್ಕೆಯಾದ 80 ಗ್ರಾ.ಪಂ.ಗಳಿಗೆ ಶಿಕ್ಷಣ ಫೌಂಡೇಶನ್ ವತಿಯದ ಲ್ಯಾಪ್ ಟಾಪ್ ಹಾಗೂ ಆಂಡ್ರಾಯ್ಡ್ ಸ್ಮಾರ್ಟ್ ಫೋನ್. ಸಾಂಕೇತಿಕವಾಗಿ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ವಿತರಣೆ.

– ಖಾದಿ-ಗ್ರಾಮೋದ್ಯೋಗ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

////////////////////////

Previous Post
ಶಿವಮೊಗ್ಗದಲ್ಲಿ ಕೋಮು ಸಂಘರ್ಷ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೇ ಕಿಡಿ ರಾಜ್ಯಕ್ಕೆ ಹಬ್ಬಬಹುದು – ಬಿ.ವೈ ವಿಜಯೇಂದ್ರ
Next Post
4x400m ಮೀಟರ್ ಮಿಶ್ರ ರಿಲೇಯಲ್ಲಿ ಶ್ರೀಲಂಕಾ ಅನರ್ಹ, ಭಾರತಕ್ಕೆ ಬೆಳ್ಳಿ ಪದಕ

Recent News