25 ಕೋಟಿ ಜನರು ಬಡತನದಿಂದ ಪಾರು- 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ- ನಿರ್ಮಲಾ

25 ಕೋಟಿ ಜನರು ಬಡತನದಿಂದ ಪಾರು- 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ- ನಿರ್ಮಲಾ

ದೆಹಲಿ ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಮೂರು ತಿಂಗಳ ಕಾಲ ಖರ್ಚು ಮಾಡಬೇಕಾದ ಮೊತ್ತದ ಲೆಕ್ಕವನ್ನು ಒಳಗೊಂಡಿದೆ. ಸಾರ್ವತ್ರಿಕ ಚುನಾವಣೆಯ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸರ್ಕಾರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತಿದೆ ಎಂದು ಹೇಳಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಗುರಿಯೊಂದಿಗೆ ತಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದರು.

ಮೋದಿ ಸರ್ಕಾರವು ದೇಶದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ ಎಂದು ಹಣಕಾಸು ಸಚಿವರು ಈ ವೇಳೆ ಹೇಳಿದರು. ಪ್ರತಿ ಮನೆಗೆ ನೀರು, ವಿದ್ಯುತ್, ಗ್ಯಾಸ್, ಹಣಕಾಸು ಸೇವೆ, ಎಲ್ಲರಿಗೂ ಬ್ಯಾಂಕ್ ಖಾತೆ ತೆರೆಯುವ ಕೆಲಸ ಮಾಡಲಾಗಿದೆ. ಆಹಾರದ ಸಮಸ್ಯೆಯನ್ನು ಪರಿಹರಿಸಲಾಗಿದೆ. 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲಾಗಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರ ಆದಾಯ ಹೆಚ್ಚಾಗಿದೆ.

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು. ನಾವು ಜನರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸಿದ್ದೇವೆ. ನಮ್ಮ ಸರ್ಕಾರ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಬಗ್ಗೆ ಗರಿಷ್ಠ ಗಮನ ಹರಿಸುತ್ತಿದೆ. ಅವರ ಬದುಕನ್ನು ಹಸನಾಗಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಬಡವರ ಕಲ್ಯಾಣ, ದೇಶದ ಕಲ್ಯಾಣವಾಗಿದೆ. ಬಡವರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಜನ್ ಧನ್ ಖಾತೆಯಿಂದ ನೇರ ಲಾಭ ವರ್ಗಾವಣೆ ಮೂಲಕ 34 ಲಕ್ಷ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮೂಲಕ 4 ಕೋಟಿ ರೈತರಿಗೆ ಇದರ ಲಾಭ ನೀಡಲಾಗಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. 2014ಕ್ಕೂ ಮುನ್ನ ದೊಡ್ಡ ಸವಾಲುಗಳಿದ್ದವು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು 3 ಸಾವಿರ ಹೊಸ ಐಟಿಐಗಳು, 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಎಐಐಎಂಎಸ್ ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂದು ಹಣಕಾಸು ಸಚಿವರು ಹೇಳಿದರು. ಸರ್ಕಾರದ ಈ ಯೋಜನೆಗಳ ಮೂಲಕ ಸಾಕಷ್ಟು ಬದಲಾವಣೆಯಾಗಿದೆ ಎಂದರು. ಇನ್ನೂ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ನೀಡಲಾಗಿದೆ. ದೇಶದ ಆರ್ಥಿಕತೆ ಚೆನ್ನಾಗಿಯೇ ಇದೆ. ದೇಶದ ಜನರು ಚೆನ್ನಾಗಿ ಸಂಪಾದಿಸುತ್ತಿದ್ದಾರೆ. ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದರು. ಪ್ರವಾಸೋದ್ಯಮಕ್ಕೆ 75,000 ಕೋಟಿ ಹಣ ಮೀಸಲು ವಿಮಾನ, ರೈಲು, ಮೆಟ್ರೋ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 40 ಸಾವಿರ ರೈಲು ಕೋಚ್ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮಹಾನಗರಗಳಿಗೂ ಮೆಟ್ರೋ ರೈಲು ವಿಸ್ತರಣೆ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲೆಕ್ಟ್ರಾನಿಕ ವಾಹನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಲಕ್ಷದೀಪ್ ಇದೀಗ ಪ್ರವಾಸಿ ತಾಣವಾಗಿದೆ ಎಂದು ಹೇಳಿದರು.

ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ ರಚನೆ, ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ, ಲಕ್ಷದೀಪ್ ಅಭಿವೃದ್ಧಿಗೆ ಹೆಚ್ಚಿನ ಒತ್ತು, ರಾಜ್ಯಗಳಲ್ಲಿ ಟೂರಿಸಂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮಕ್ಕೆ 75,000 ಕೋಟಿ ಹಣ ಮೀಸಲು ಇಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Previous Post
ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಂಪರ್: ಕೇಂದ್ರದ ವಾಗ್ದಾನ ಏನು ತಿಳಿಯಿರಿ!
Next Post
ಐದು ವರ್ಷಗಳಲ್ಲಿ ಮೂರು ಕೋಟಿ ಮನೆ ನಿರ್ಮಾಣದ ಗುರಿ

Recent News