3 ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

3 ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ : ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973 ರ ಬದಲಿಗೆ ಸಂಸತ್ತು ಜಾರಿಗೆ ತಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ತಡೆ ನೀಡಬೇಕು ಮತ್ತು ಅವುಗಳ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ತಜ್ಞರ ಸಮಿತಿ ರಚನೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾ. ಬೇಲಾ ಎಂ ತ್ರಿವೇದಿ ನೇತೃತ್ವ ರಜಾಕಾಲದ ಪೀಠವು ಈ ವಿಷಯವನ್ನು ವಜಾಗೊಳಿಸುತ್ತಿರುವುದಾಗಿ ಅರ್ಜಿದಾರರ ಪರ ವಕೀಲ ವಿಶಾಲ್ ತಿವಾರಿಗೆ ತಿಳಿಸಿತು. ಇದಕ್ಕೆ ಕಳವಳವನ್ನು ವ್ಯಕ್ತಪಡಿಸಿ ವಕೀಲ ತಿವಾರಿ ಸರ್ಕಾರದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಲು ಸ್ವಾತಂತ್ರ್ಯವನ್ನು ಕೋರಿದರೂ, ಪೀಠವು ಅದಕ್ಕೂ ನಿರಾಕರಿಸಿತು.

ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಲು ನಿರಾಸಕ್ತಿ ವ್ಯಕ್ತಪಡಿಸಿದ ಹಿನ್ನಲೆ ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅದನ್ನು ಹಿಂಪಡೆಯಲು ನಿರ್ಧರಿಸಿದರು ಅದರಂತೆ ಅರ್ಜಿಯನ್ನು ಹಿಂಪಡೆಯಲಾಗಿದೆ. ಕಳೆದ ಫೆಬ್ರವರಿಯಲ್ಲಿ, ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಕಾನೂನುಗಳು ಇನ್ನೂ ಜಾರಿಗೆ ಬರಬೇಕಿದೆ ಎಂದು ಗಮನಿಸಿ ಇದೇ ರೀತಿಯ ಅರ್ಜಿಯನ್ನು ವಜಾಗೊಳಿಸಿತ್ತು.

ಹೆಚ್ಚಿನ ಸಂಸದರು ಅಮಾನತಿನಲ್ಲಿದ್ದಾಗ ಯಾವುದೇ ಸರಿಯಾದ ಸಂಸತ್ತಿನ ಚರ್ಚೆಯಿಲ್ಲದೆ ಸಂಬಂಧಿತ ಮಸೂದೆಗಳನ್ನು ಅಂಗೀಕರಿಸಿದ ಕಾರಣ, 3 ಕಾನೂನುಗಳ ಜಾರಿಯಲ್ಲಿ ಅಕ್ರಮಗಳು ಮತ್ತು ವ್ಯತ್ಯಾಸಗಳಿವೆ ಎಂದು ದೂರಿದ್ದ ವಕೀಲ ವಿಶಾಲ್ ತಿವಾರಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ 3 ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸುವಂತೆ ನಿರ್ದೇಶನ ನೀಡಲು ಮನವಿ ಮಾಡಿದ್ದರು.

Previous Post
ನೀತಿ ಸಂಹಿತೆ ಉಲ್ಲಂಘನೆ ಬಿಜೆಪಿ ವಿರುದ್ಧ ಕ್ರಮಕೈಗೊಳ್ಳದ ಚು. ಆಯೋಗದ ವಿರುದ್ಧ ಹೈಕೋರ್ಟ್ ಚಾಟೀ
Next Post
ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ: ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ

Recent News