30 ಹಂತಗಳಲ್ಲಿ 16,518 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ನೀಡಿದೆ ಸುಪ್ರೀಂಕೋರ್ಟ್‌ಗೆ ಎಸ್‌ಬಿಐ ಅಫಿಡೆವಿಟ್

30 ಹಂತಗಳಲ್ಲಿ 16,518 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ನೀಡಿದೆ ಸುಪ್ರೀಂಕೋರ್ಟ್‌ಗೆ ಎಸ್‌ಬಿಐ ಅಫಿಡೆವಿಟ್

ನವದೆಹಲಿ : ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‌ಗಳ‌ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ ಬೆನ್ನಲೆ ಸುಪ್ರೀಂಕೋರ್ಟ್‌ಗೆ ಎಸ್‌ಬಿಐ ಬ್ಯಾಂಕ್ ಅಫಿಡೆವಿಟ್ ಸಲ್ಲಿಸಿದೆ. ಏಪ್ರಿಲ್ 1, 2019 ರಿಂದ ಫೆಬ್ರವರಿ 15, 2024 ರ ಅವಧಿಯಲ್ಲಿ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ, ಅವುಗಳಲ್ಲಿ 22,030 ಬಾಂಡ್‌ಗಳನ್ನು ರಿಡೀಮ್ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಖಾರಾ ಅವರು ಈ ಮಾಹಿತಿಯೊಂದಿಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್‌ನಲ್ಲಿ ಬಾಂಡ್ ಖರೀದಿಸಿದ ದಿನಾಂಕ, ಮುಖಬೆಲೆ ಮತ್ತು ಖರೀದಿದಾರರ ಹೆಸರನ್ನು ದಾಖಲಿಸಿದ ದಾಖಲೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಎನ್‌ಕ್ಯಾಶ್‌ಮೆಂಟ್ ದಿನಾಂಕ ಮತ್ತು ಎನ್‌ಕ್ಯಾಶ್ ಮಾಡಿದ ಬಾಂಡ್‌ಗಳ ಮುಖಬೆಲೆಯ ಮಾಹಿತಿಯನ್ನು ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಎಸ್‌ಬಿಐ ನ್ಯಾಯಾಲಯದ ಆದೇಶಗಳನ್ನು ಪಾಲಿಸಿದೆ ಮತ್ತು ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. 2018 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಎಸ್‌ಬಿಐ 30 ಹಂತಗಳಲ್ಲಿ 16,518 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ‌.

ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂಕೋರ್ಟ್ ಈ ಹಿಂದೆ ರದ್ದುಗೊಳಿಸಿತು, ಇದನ್ನು “ಅಸಂವಿಧಾನಿಕ” ಎಂದು ಕರೆದು ಈವರೆಗೂ ನೀಡಿದ ದೇಣಿಗೆಯನ್ನು ಬಹಿರಂಗಪಡಿಸುವಂತೆ ಆದೇಶಿಸಿತು. ಎಸ್‌ಬಿಐ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ಕೋರಿತ್ತು. ಅದರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿ, ಮಂಗಳವಾರದ ಕೆಲಸದ ಸಮಯದ ಮುಕ್ತಾಯದೊಳಗೆ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿತ್ತು.

Previous Post
ಮಾರ್ಚ್ 13 ರೊಳಗೆ Paytm FASTag ಬದಲಿಸಿ – ಬಳಕೆದಾರರಿಗೆ NHAI ಸಲಹೆ
Next Post
ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಹಾಲಿ ಸಂಸದರಿಗೆ ಶಾಕ್

Recent News