6 ಮಂದಿ ಸಾವು, 250 ಜನರಿಗೆ ಗಾಯ- ಕರ್ಫ್ಯೂ ಜಾರಿ, ಶಾಲೆಗಳು ಬಂದ್!

6 ಮಂದಿ ಸಾವು, 250 ಜನರಿಗೆ ಗಾಯ- ಕರ್ಫ್ಯೂ ಜಾರಿ, ಶಾಲೆಗಳು ಬಂದ್!

ಹಲ್ದ್ವಾನಿ ಫೆಬ್ರವರಿ 9: ಉತ್ತರಾಖಂಡದಲ್ಲಿ ಹಿಂಸಾಚಾರ ಭುಗಿಲೆದ್ದು 6 ಜನ ಸಾವನ್ನಪ್ಪಿದ್ದು 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದರಿಂದಾಗಿ ಶಾಲೆಗಳನ್ನು ಬಂದ್ ಮಾಡಲಾಗಿದ್ದು ಕರ್ಫ್ಯೂ ಜಾರಿಗೊಳಿಸಲಾಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗುರುವಾರ ಅಕ್ರಮ ಮದರಸಾ ಮತ್ತು ಪಕ್ಕದ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿದೆ. ಇದರಿಂದಾಗಿ ಗಲಭೆಕೋರರ ವಿರುದ್ಧ ಶೂಟ್-ಆಟ್-ಸೈಟ್ ಆದೇಶಗಳನ್ನು ಹೊರಡಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಹಿಂಸಾಚಾರಕ್ಕೆ ಕಾರಣವೇನು? ನ್ಯಾಯಾಲಯದ ಆದೇಶದ ನಂತರ ಸರ್ಕಾರಿ ಅಧಿಕಾರಿಗಳ ತಂಡವು ಪೊಲೀಸರೊಂದಿಗೆ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ಮತ್ತು ಪಕ್ಕದ ಮಸೀದಿಯನ್ನು ನೆಲಸಮಗೊಳಿಸಲು ಪ್ರಯತ್ನಿಸಿದಾಗ ಈ ಘರ್ಷಣೆ ಸಂಭವಿಸಿದೆ. ಮದರಸಾ ಮತ್ತು ಮಸೀದಿಯನ್ನು ಕಾನೂನುಬಾಹಿರವಾಗಿ ಕಟ್ಟಲಾಗಿದ್ದು ಅದನ್ನು ಧ್ವಂಸಕ್ಕೆ ನ್ಯಾಯಾಲಯ ಆದೇಶಿಸಿತ್ತು. ಹೀಗಾಗಿ ಅಧಿಕಾರಿಗಳ ತಂಡ ಪೊಲೀಸರೊಂದಿಗೆ ಮಸೀದಿ ಧ್ವಂಸಕ್ಕೆ ಮುಂದಾದಾಗ ಹಲ್ದ್ವಾನಿಯ ವನ್ಭುಲ್ಪುರ ಪ್ರದೇಶದ ನಿವಾಸಿಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಹಲವಾರು ಆಡಳಿತ ಅಧಿಕಾರಿಗಳು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರು ಸಹ ಈ ಘರ್ಷಣೆಯಲ್ಲಿ ಸಿಕ್ಕಿಕೊಂಡು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಚರಣೆ ವೇಳೆ ಉದ್ರಿಕ್ತರ ಗುಂಪೊಂದು ಅಧಿಕಾರಿಗಳ ಮೇಲೆ ಕಲ್ಲುಗಳನ್ನು ಎಸೆಯಲಾರಂಭಿಸಿತು. ಈ ವೇಳೆ ಅಶ್ರುವಾಯು ಮೂಲಕ ಪ್ರತೀಕಾರ ತೀರಿಸಲು ಪೊಲೀಸರು ಮುಂದಾದರು. ಆದರೆ ಉದ್ರಿಕ್ತರು ಪೊಲೀಸ್ ಠಾಣೆಯ ಹೊರಗೆ ವಾಹನಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಹಿಂಸಾಚಾರ ಹೆಚ್ಚಾಯಿತು. ವಾಹನಗಳಿಗೆ ಬೆಂಕಿ: ಬುಲ್ಡೋಜರ್ ಕಟ್ಟಡಗಳನ್ನು ನೆಲಸಮಗೊಳಿಸಿದ್ದರಿಂದ ಆಕ್ರೋಶಗೊಂಡ ಮಹಿಳೆಯರು ಸೇರಿದಂತೆ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅವರು ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ, ಪರಿಸ್ಥಿತಿ ವೇಗವಾಗಿ ಉಲ್ಬಣಗೊಂಡಿತು. ನಂತರ ಜನಸಮೂಹವು ಪೊಲೀಸರು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲೆ ಕಲ್ಲುಗಳನ್ನು ಎಸೆದರು. ಇದರ ಪರಿಣಾಮವಾಗಿ ಗಾಯಗಳು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಯಿತು. 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಮತ್ತು ಭದ್ರತಾ ಬಸ್‌ಗೆ ಬೆಂಕಿ ಹಚ್ಚಲಾಗಿದೆ.

ಶಂತಿ ಕಾಪಾಡಲು ಸಿಎಂ ಮನವಿ ನ್ಯಾಯಾಲಯದ ಆದೇಶದ ನಂತರ ನೆಲಸಮಗೊಳಿಸಲು ತಂಡವನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಈ ಪ್ರದೇಶದಲ್ಲಿ “ಸಮಾಜ ವಿರೋಧಿಗಳು” ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು. ಸುವ್ಯವಸ್ಥೆ ಪುನಃಸ್ಥಾಪಿಸಲು ಹೆಚ್ಚುವರಿ ಪೊಲೀಸ್ ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಶಾಂತಿ ಕಾಪಾಡುವಂತೆ ಧಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕರ್ಫ್ಯೂ ಜಾರಿ ಮುಂಜಾಗ್ರತಾ ಕ್ರಮವಾಗಿ ಹಲ್ದ್ವಾನಿಯಾದ್ಯಂತ ಕರ್ಫ್ಯೂ ಹೇರಲಾಗಿದೆ. ಪೀಡಿತ ಪ್ರದೇಶಗಳಲ್ಲಿ ಅಂಗಡಿಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರಿಗೆ ತಲೆ ಮತ್ತು ಮುಖಕ್ಕೆ ಗಾಯಗಳಾಗಿವೆ. ಧ್ವಂಸವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಮೇಲೆ ಉತ್ತರಾಖಂಡ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಿತ್ತು. ಆದಾಗ್ಯೂ, ನ್ಯಾಯಾಲಯವು ಪರಿಹಾರವನ್ನು ನೀಡಲಿಲ್ಲ. ಹೀಗಾಗಿ ಕೆಡವಲು ಕಾರ್ಯ ಮುಂದುವರೆಯಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 14 ರಂದು ನಿಗದಿಪಡಿಸಲಾಗಿದೆ.

Previous Post
ಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್
Next Post
10 ಲಕ್ಷ ಲೋನ್‌ಗೆ 5 ಲಕ್ಷ ಸಬ್ಸಿಡಿ: RBI ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಮಹಿಳೆ

Recent News