ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಅತೀ ಉದ್ದದ ಕೇಬಲ್‌ ತೂಗು ಸೇತುವೆ ʻಸುದರ್ಶನ ಸೇತುʼವನ್ನು ಲೋಕಾರ್ಪಣೆ ಮಾಡಿದ್ದಾರೆ. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗುಜರಾತ್‌ನ ಓಖಾ ಮುಖ್ಯ ಭೂಭಾಗ ಮತ್ತು ಬೇಟ್‌ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಅತೀ ಉದ್ದದ ಕೇಬಲ್‌ ತೂಗು ಸೇತುವೆಯನ್ನು ಉದ್ಘಾಟಿಸಿದರು. 2017ರಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುದರ್ಶನ ಸೇತುವೆ ಉದ್ಘಾಟನೆಗೂ ಮೊದಲು ಪ್ರಧಾನಿ ಮೋದಿ ಬೇಟ್‌ ದ್ವಾರಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸುದರ್ಶನ ಸೇತು ವಿಶೇಷತೆಗಳೇನು?
ಚತುಷ್ಪಥ ರಸ್ತೆಯನ್ನು ಒಳಗೊಂಡಿರುವ ಸುದರ್ಶನ ಸೇತು 2.32 ಕಿಮೀ ಗಳಷ್ಟು ಉದ್ದವಿದೆ. ಸರಿಸುಮಾರು 980 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುದರ್ಶನ ಸೇತುವನ್ನು ಓಖಾ-ಬೇಟ್ ದ್ವಾರಕಾ ಸಿಗ್ನೇಚರ್ ಬ್ರಿಡ್ಜ್‌ ಅಂತಲೂ ಕರೆಯುತ್ತಾರೆ. ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಇದು ಒಂದು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿದೆ

ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆ ಶ್ಲೋಕ
ಸೇತುವೆ ಮೇಲೆ ನಿರ್ಮಾಣಗೊಂಡಿರುವ ರಸ್ತೆಗಳು 27.2 ಮೀಟರ್‌ ಅಂದ್ರೆ ಸುಮಾರು 89 ಅಡಿಗಳಷ್ಟು ಅಗಲವಿದೆ. ಎರಡೂ ಬದಿಗಳಲ್ಲಿ 2.5 ಮೀಟರ್‌ (8 ಅಡಿ) ಗಳಷ್ಟು ಪಾದಚಾರಿ ಮಾರ್ಗಕ್ಕೆ ಸ್ಥಳಾವಕಾಶವಿದೆ. ಈ ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನ ಹಾಕಲಾಗಿದೆ ಮತ್ತು ಶ್ರೀಕೃಷ್ಣನ ಚಿತ್ರಗಳನ್ನ ಅಲಂಕರಿಸಲಾಗಿದೆ.

20 ಲಕ್ಷ ಯಾತ್ರಾರ್ಥಿಗಳಿಗೆ ಪ್ರಯೋಜನ
ಬೇಟ್ ದ್ವಾರಕಾ, ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದೆ. ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವೂ ಇದೆ. ಈ ಮಾರ್ಗವು ದೇವಸ್ಥಾನಗಳಿಗೆ ಪ್ರಯಾಣಿಸುವ ಭಕ್ತರಿಗೆ ಮತ್ತಷ್ಟು ಅನುಕೂಲಕರವಾಗಲಿದೆ. ಈ ಸುದರ್ಶನ ಸೇತು ಸುಮಾರು 8,500ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ಪ್ರದೇಶದಲ್ಲಿನ ದೇವಾಲಯಗಳಿಗೆ ಭೇಟಿ ನೀಡುವ 20 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ.

Previous Post
ಕಾಶಿ ಕಾರಿಡಾರ್ ಉದ್ಘಾಟನೆ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ
Next Post
ಹೊಸ ಸರ್ಕಾರದ ಕೆಲಸಕ್ಕೆ ತಯಾರಿ ಆರಂಭಿಸಿದ ಮೋದಿ

Recent News