ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನ ಬಿಜೆಪಿ ವಿರುದ್ಧ ಆಪ್ ನಾಯಕರ ಗಂಭೀರ ಆರೋಪ
ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಸ್ಥಿರಗೊಳಿಸಲು ರಾಜಕೀಯ ಪಿತೂರಿ ನಡೆಸುತ್ತಿರುವ ಬಿಜಪಿ, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿರುವುದಾಗಿ ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಅಪರಾಧ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಆದ್ದರಿಂದ ದೆಹಲಿಯ ಚುನಾಯಿತ ಸರ್ಕಾರ ಉರುಳಿಸಲು ಸಂಚು ನಡೆಯುತ್ತಿದೆ. ಈ ಹಿಂದೆ ನಡೆದ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಪೂರ್ವನಿಯೋಜಿತವಾಗಿಯೇ ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ಅತಿಶಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಚು ರೂಪಿಸುತ್ತಿದೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿದೆ. ಅದರ ಸೂಚನೆಗಳು ನಮಗೆ ಸಿಕ್ಕಿವೆ. ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ದೆಹಲಿಯಲ್ಲಿ ಯಾವುದೇ ಅಧಿಕಾರಿಯ ನೇಮಕಾತಿ, ವರ್ಗಾವಣೆ ಆಗಿಲ್ಲ. ಅಧಿಕಾರಿಗಳು ಸರ್ಕಾರದ ಸಭೆಗಳಿಗೆ ಬರುತ್ತಿಲ್ಲ. ಕಳೆದ ವಾರ, ಲೆಫ್ಟಿನೆಂಟ್ ಗವರ್ನರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಆಧಾರರಹಿತ ಪತ್ರ ಬರೆದು, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯನ್ನೂ ವಜಾ ಮಾಡಿಸಿದ್ದಾರೆ. ಇವೆಲ್ಲವೂ ದೆಹಲಿ ಸರ್ಕಾರವನ್ನು ಮುಗಿಸಲು ಮಾಡಿರುವ ಸಂಚು ಎಂದು ಅತಿಶಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಜನರ ತೀರ್ಪಿಗೆ ವಿರುದ್ಧವಾದದ್ದು ಎಂದು ಬಿಜೆಪಿಯನ್ನು ಎಚ್ಚರಿಸಲು ಬಯಸುತ್ತೇನೆ. ದೆಹಲಿಯ ಜನರು ಅರವಿಂದ್ ಕೇಜ್ರವಾಲ್ ಮತ್ತು ಆಪ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ, ಇಂದು ಚುನಾವಣೆ ನಡೆದರೆ ಅರವಿಂದ್ ಕೇಜ್ರಿವಾಲ್ ಗೆಲ್ಲುತ್ತಾರೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ಬಿಜೆಪಿಯ ಕೇಂದ್ರ ಸರ್ಕಾರ ಪಿತೂರಿಯ ಮೂಲಕ ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು 2013ರಲ್ಲೂ ಪ್ರಯತ್ನಸಿತ್ತು ಎಂದು ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಪೊಟೊ ಬಳಸಿ
ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ITO ಫುಟ್ ಓವರ್ ಬ್ರಿಡ್ಜ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಆಮ್ ಆದ್ಮಿ ಪಾರ್ಟಿ ಜಿಂದಾಬಾದ್’ ಮತ್ತು ‘ ಅರವಿಂದ್ ಕೇಜ್ರಿವಾಲ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದೆ ಕಾರ್ಯಕರ್ತರು ‘ಜೈಲ್ ಕಾ ಜವಾಬ್ ವೋಟ್ ಸೆ’ ಎಂಬ ಪೋಸ್ಟರ್ಗಳನ್ನು ಪ್ರದರ್ಶಿಸಿದರು.