ಉಕ್ರೇನ್‌ಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ನೀಡಲಿದೆ ಅಮೆರಿಕ!

ಉಕ್ರೇನ್‌ಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ನೀಡಲಿದೆ ಅಮೆರಿಕ!

ಇನ್ನೇನು 3ನೇ ಮಹಾಯುದ್ಧ ಶುರುವಾಗುವ ಭಯ ಆವರಿಸಿದೆ. ಇದೇ ಕಾರಣಕ್ಕೆ ಇದೀಗ, ತೀವ್ರ ತಿಕ್ಕಾಟ ಕೂಡ ಶುರುವಾಗಿದೆ. ಜಗತ್ತಿನಲ್ಲಿ 2 ಕಡೆ ಭೀಕರ ಯುದ್ಧಗಳು ನಡೆಯುತ್ತಿವೆ. ಅದರಲ್ಲೂ ರಷ್ಯಾ VS ಉಕ್ರೇನ್ ಯುದ್ಧ ಜಗತ್ತಿನ ಬುಡವನ್ನೇ ಅಲುಗಾಡಿಸುತ್ತಿದೆ. ಹೀಗಾಗಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ವಿಫಲವಾಗುತ್ತಿದ್ದು, ರಷ್ಯಾ ವಿರುದ್ಧ ಅಮೆರಿಕ ಮತ್ತೊಂದು ಮಹಾ ರಣತಂತ್ರ ಹೂಡಿದೆ. ಉಕ್ರೇನ್ ಮೊದಲಿನಿಂದ ಕೂಡ ಅಮೆರಿಕದ ಹಂಗಿನಲ್ಲೇ ಬದುಕುತ್ತಿದ್ದು, ರಷ್ಯಾ ವಿರುದ್ಧವು ಹೋರಾಡಲು ಈಗ ಅಮೆರಿಕದ ಸಹಾಯ ಬೇಕೆ ಬೇಕು. ಯಾಕಂದ್ರೆ, ಅಮೆರಿಕದ ಸಹಾಯ ಇಲ್ಲದೆ ರಷ್ಯಾ ರೀತಿ ಬಲಾಢ್ಯ ದೇಶವನ್ನು ಎದುರಿಸುವುದು ಉಕ್ರೇನ್‌ಗೆ ಅಸಾಧ್ಯದ ಮಾತು. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ಅಮೆರಿಕ ಕೂಡ ಇತ್ತೀಚೆಗೆ ಲಕ್ಷ ಲಕ್ಷ ಕೋಟಿ ಸಹಾಯ ಮಾಡಿದೆ. ಇದೇ ಸಮಯದಲ್ಲಿ, ತನ್ನ ಬಳಿ ಇರುವ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನೂ ಉಕ್ರೇನ್‌ಗೆ ನೀಡಲು ಮುಂದಾಗಿದೆ.

ರಷ್ಯಾ ವಿರುದ್ಧ ಅಮೆರಿಕ ತಂತ್ರ ಏನು? ಇದೀಗ ಹೊರಬೀಳುತ್ತಿರುವ ಮಾಹಿತಿ ಪ್ರಕಾರ, ಅಮೆರಿಕ ತನ್ನ ಬಳಿ ಇರುವ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯನ್ನು ಉಕ್ರೇನ್‌ಗೆ ಉಡುಗೊರೆಯಾಗಿ ನೀಡಲಿದೆ ಎನ್ನಲಾಗಿದೆ. ಇದರಿಂದ, ರಷ್ಯಾಗೆ ದೊಡ್ಡ ಹಿನ್ನಡೆ ಆಗುವುದು ಖಚಿತ. ಈ ಹಿಂದೆ ಕೂಡ ಅಮೆರಿಕ, ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯನ್ನ ಉಕ್ರೇನ್‌ಗೆ ನೀಡಲು ಮುಂದಾದ ಸಮಯದಲ್ಲಿ ರಷ್ಯಾ ಗುಡುಗಿತ್ತು. ಅಲ್ಲದೆ ಇಂತಹ ಮಾತುಗಳು ಕೇಳಿಬಂದ ತಕ್ಷಣ ಉಕ್ರೇನ್ ಮೇಲೆ ಮನಸ್ಸಿಗೆ ಬಂದಂತೆ ದಾಳಿ ಮಾಡಿತ್ತು. ಈಗ ನೋಡಿದರೆ ಮತ್ತೆ ಅದೇ ರೀತಿಯ ವಾತಾವರಣ ನಿರ್ಮಾಣ ಆಗುತ್ತಿದೆ. ಏನೆಲ್ಲಾ ಸಹಾಯ ಮಾಡುತ್ತಿದೆ ಅಮೆರಿಕ? ಅಮೆರಿಕ ಈಗಾಗಲೇ ದೊಡ್ಡ ಮೊತ್ತದ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪೈಕಿ ಉಕ್ರೇನ್, ತೈವಾನ್ ಮತ್ತು ಇಸ್ರೇಲ್‌ಗೆ ಸೇರಿ ಒಟ್ಟು 95 ಬಿಲಿಯನ್ ಡಾಲರ್ ಹಣದ ಸಹಾಯ ಮಾಡಲು ಮುಂದಾಗಿದೆ. 95 ಬಿಲಿಯನ್ ಡಾಲರ್ ಹಣದಲ್ಲಿ ಉಕ್ರೇನ್ ದೊಡ್ಡ ಮಟ್ಟದಲ್ಲಿಯೇ ಸಹಾಯ ಪಡೆಯಲಿದೆ. ಹೀಗಾಗಿ ರಷ್ಯಾ ವಿರುದ್ಧ ಉಕ್ರೇನ್‌ಗೆ ಮತ್ತೆ, ದೊಡ್ಡ ಮೊತ್ತದ ಸಹಾಯ ಮಾಡಲು ಮುಂದಾಗಿದೆ ಅಮೆರಿಕ. ಅಮೆರಿಕ ಹೀಗೆ ನೀಡುತ್ತಿರುವ ಸಹಾಯದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಕೂಡ ಸೇರಿದ್ದು, ಕ್ಷಿಪಣಿ ವ್ಯವಸ್ಥೆಗಳನ್ನು ಕೂಡ ಉಡುಗೊರೆಯಾಗಿ ನೀಡುತ್ತಿದೆ.

ಒಟ್ನಲ್ಲಿ ಹೀಗೆ ಉಕ್ರೇನ್ & ರಷ್ಯಾ ಯುದ್ಧ ಮುಂದುವರಿದರೆ ಭವಿಷ್ಯದಲ್ಲಿ ಜಗತ್ತು ಅಪಾಯ ಎದುರಿಸುವುದು ಗ್ಯಾರಂಟಿ. ಹೀಗಾಗಿ, ಈ ವಿಚಾರವನ್ನು ಇದೀಗ ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಬೇಕಿದೆ. ಇಲ್ಲವಾದರೆ ಈ ಯುದ್ಧ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವುದು ಗ್ಯಾರಂಟಿ. ಈ ಮೂಲಕ ಮುಂದೆ 3ನೇ ಮಹಾಯುದ್ಧ ಶುರುವಾದರೂ ಆಗಬಹುದು.

Previous Post
ಎಲ್ಲಾ ಪೀಸ್.. ಪೀಸ್.. ಇಸ್ರೇಲ್ ಸೇನೆ ದಾಳಿಗೆ ನರಕವಾಯ್ತು ಗಾಜಾ…
Next Post
ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಗಢಗಢ!

Recent News