ಏಮ್ಸ್‌ ಆಸ್ಪತ್ರೆ ವಾರ್ಡ್‌ನೊಳಗೆ ಕಾರು ನುಗ್ಗಿಸಿದ ಪೊಲೀಸರು

ಏಮ್ಸ್‌ ಆಸ್ಪತ್ರೆ ವಾರ್ಡ್‌ನೊಳಗೆ ಕಾರು ನುಗ್ಗಿಸಿದ ಪೊಲೀಸರು

ನವದೆಹಲಿ, ಮೇ 23: ವೈದ್ಯೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಲು ಪೊಲೀಸರು ಏಮ್ಸ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನೊಳಗೆ ಕಾರನ್ನು ನುಗ್ಗಿಸಿ ಭಂಡತನ ಮೆರೆದಿರುವ ಘಟನೆ ಉತ್ತರಖಂಡ ರಾಜ್ಯದ ರಿಷಿಕೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋ ವೈರಲ್‌ ಆಗಿದೆ. ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಈ ರೀತಿ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಆಸ್ಪತ್ರೆಯ ಒಳಗೆ ಪೊಲೀಸರು ಇದ್ದ ಕಾರು ಬರುತ್ತಿರುವುದು, ಎರಡೂ ಬದಿಗಳಲ್ಲಿ ರೋಗಿಗಳು ಬೆಡ್‌ ಮೇಲೆ ಮಲಗಿರುವುದು ಕಂಡು ಬಂದಿದೆ. ಅಲ್ಲಿದ್ದ ಸೆಕ್ಯೂರಿಟಿಗಳು ಸೇರಿ ಹಲವರು ಕಾರು ಆಸ್ಪತ್ರೆಯ ಒಳಗೆ ಸರಾಗವಾಗಿ ಬರಲು ಅನುವು ಮಾಡಿಕೊಡುತ್ತಿರುವುದು, ರೋಗಿಗಳು ಮಲಗಿರುವ ಬೆಡ್‌ಗಳನ್ನು, ಸ್ಟ್ರೆಚರ್‌ಗಳನ್ನು ತಳ್ಳುತ್ತಿರುವುದು ಕಂಡು ಬಂದಿದೆ.

ನರ್ಸಿಂಗ್ ಅಧಿಕಾರಿ ಸತೀಶ್ ಕುಮಾರ್ ಆಪರೇಷನ್ ಥಿಯೇಟರ್‌ನಲ್ಲಿ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ರಿಷಿಕೇಶ್ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ತಿಳಿಸಿದ್ದಾರೆ. ಘಟನೆಯನ್ನು ಖಂಡಿಸಿ ಸಂತ್ರಸ್ತ ವೈದ್ಯೆ ಅಪರಾಧಿಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಡೀನ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡ ಪೊಲೀಸರು ಸತೀಶ್ ಕುಮಾರ್‌ಗೆ ಬಂಧಿಸಲು ಆಸ್ಪತ್ರೆಯ ಒಳಗೆ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದು ವೀಡಿಯೊದಲ್ಲಿ, ಆರೋಪಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವಾಗ ಪ್ರತಿಭಟಿಸುವ ವೈದ್ಯರನ್ನು ಪೊಲೀಸ್ ಅಧಿಕಾರಿಗಳ ಗುಂಪು ಸುತ್ತುವರಿದಿರುವುದನ್ನು ಕಾಣಬಹುದು. ಸತೀಶ್‌ಕುಮಾರ್‌ ಮಾಡಿರುವ ತಪ್ಪಿಗೆ ಕೇವಲ ಅಮಾನತು ಸಾಕಾಗುವುದಿಲ್ಲ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಎಂದು ಘೋಷಣೆ ಕೂಗಿದ್ದಾರೆ. ಏಮ್ಸ್ ರಿಷಿಕೇಶದಲ್ಲಿ ತುರ್ತು ಸೇವೆಗಳು ಇನ್ನೂ ಕಾರ್ಯನಿರ್ವಹಿಸುತ್ತಿದೆ, ಮಂಗಳವಾರದಿಂದ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಕಳೆದ 72 ಗಂಟೆಗಳಿಂದ ಎಫ್‌ಐಆರ್ ದಾಖಲಾಗಿಲ್ಲ ಮತ್ತು ಆರೋಪಿ ಆರಾಮವಾಗಿ ತಿರುಗಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದರು.

ಈ ವಿಷಯವನ್ನು ಗಮನಿಸಿ ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ಅವರು ಏಮ್ಸ್ ಆಡಳಿತವನ್ನು ಭೇಟಿ ಮಾಡಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

Previous Post
ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತಯಾರಿ
Next Post
ಪ. ಬಂಗಾಳ ರಾಜ್ಯಪಾಲರ ವಿರುದ್ಧ ಟಿಎಂಸಿ ದೂರು

Recent News