ಪ. ಬಂಗಾಳ ರಾಜ್ಯಪಾಲರ ವಿರುದ್ಧ ಟಿಎಂಸಿ ದೂರು

ಪ. ಬಂಗಾಳ ರಾಜ್ಯಪಾಲರ ವಿರುದ್ಧ ಟಿಎಂಸಿ ದೂರು

ಕೋಲ್ಕತ್ತಾ, ಮೇ 23: ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ್ ಬೋಸ್ ವಿರುದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕೊಲ್ಕತ್ತಾದ ರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ಆನಂದ್ ಬೋಸ್ ಅವರು ತಮ್ಮ ಎದೆಯ ಮೇಲೆ ಬಿಜೆಪಿ ಚಿಹ್ನೆ ಧರಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿದ ದೂರಿನಲ್ಲಿ ಟಿಎಂಸಿ ಆರೋಪಿಸಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ ಆನಂದ್ ಬೋಸ್ ಅವರು ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಹೇಳಿದೆ.
ರಾಜ್ಯಪಾಲರ ನಡವಳಿಕೆಯು ಪ್ರಜಾಸತ್ತಾತ್ಮಕವಲ್ಲ ಮತ್ತು ಅವರ ಹುದ್ದೆಗೆ ಇರುವ ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದೆ.

ಇದು ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ದುರ್ಬಲಗೊಳಿಸುತ್ತದೆ ಎಂದು ದೂರಿನಲ್ಲಿ ಹೇಳಿರುವ ಟಿಎಂಸಿ, ಈ ಹಿಂದೆ ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ ತಮ್ಮ ಅಧಿಕಾರವನ್ನು ಬಳಸಿಕೊಂಡ ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಗಮನಸೆಳೆದಿದೆ.

ಉದಾಹರಣೆಗೆ, 1993ರಲ್ಲಿ, ಆಯೋಗವು ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಗುಲ್ಶರ್ ಅಹ್ಮದ್ ವಿರುದ್ಧ ತನ್ನ ಮಗನ ಚುನಾವಣಾ ಪ್ರಚಾರಕ್ಕಾಗಿ ಅಧಿಕೃತ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಮೇಲೆ ಕ್ರಮ ಕೈಗೊಂಡಿತ್ತು. ಚುನಾವಣಾ ಆಯೋಗದ ಕ್ರಮದ ನಂತರ, ಅಹ್ಮದ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಟಿಎಂಸಿ ತಿಳಿಸಿದೆ.

2019ರಲ್ಲಿ, ಆಗಿನ ರಾಜಸ್ಥಾನದ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್ ಅವರು, ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮರು ಆಯ್ಕೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಚುನಾವಣಾ ಆಯೋಗವು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರಾಜ್ಯಪಾಲರ ವಿರುದ್ದ ರಾಷ್ಟ್ರಪತಿಗೆ ದೂರು ನೀಡಿತ್ತು. ಅದರಂತೆ, ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಟಿಎಂಸಿ ಹೇಳಿದೆ.

ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕಗೊಂಡವರು. ಅವರು ರಾಜಕೀಯ ಸಿದ್ಧಾಂತ ಅಥವಾ ಕೇಂದ್ರ ಸರ್ಕಾರದ ರಾಜಕೀಯ ದೃಷ್ಟಿಕೋನವನ್ನು ಪ್ರತಿನಿಧಿಸಬೇಕಾಗಿಲ್ಲ. ರಾಜ್ಯಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದನ್ನು ತಡೆಯಬೇಕು ಎಂದು ಟಿಎಂಸಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

Previous Post
ಏಮ್ಸ್‌ ಆಸ್ಪತ್ರೆ ವಾರ್ಡ್‌ನೊಳಗೆ ಕಾರು ನುಗ್ಗಿಸಿದ ಪೊಲೀಸರು
Next Post
ಅಸ್ಸಾಂನಲ್ಲಿ ಲಾಕಪ್ ಡೇತ್: ಪ್ರತಿಭಟನೆ

Recent News