ಪಠ್ಯಪುಸ್ತಕದಲ್ಲಿ ಮುಖ್ಯ ಬದಲಾವಣೆ ಇಲ್ಲ: ಸಚಿವ ಮಧು ಬಂಗಾರಪ್ಪ

ಪಠ್ಯಪುಸ್ತಕದಲ್ಲಿ ಮುಖ್ಯ ಬದಲಾವಣೆ ಇಲ್ಲ: ಸಚಿವ ಮಧು ಬಂಗಾರಪ್ಪ

ಮೈಸೂರು: ‘ಕಳೆದ ವರ್ಷವೇ ಶಾಲಾ ಪಠ್ಯಪುಸ್ತಕ ಪರಿಷ್ಕರಿಸಲಾಗಿದ್ದು, ಈ ವರ್ಷ ಯಾವುದೇ ಮುಖ್ಯ ಬದಲಾವಣೆಯಿಲ್ಲ. ಕೆಲವು ಪದ ಹಾಗೂ ವಾಕ್ಯಗಳಲ್ಲಷ್ಟೇ ಬದಲಾವಣೆಯಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪರಿಷ್ಕೃತ ಪಠ್ಯಪುಸ್ತಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿವೆ.ಶೇ 95ರಷ್ಟು ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ತಲುಪಿವೆ’ ಎಂದರು.

‘ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಕೋವಿಡ್‌ ನಂತರ ಶಾಲಾ ಮಕ್ಕಳಿಗೆ ಬೈಸಿಕಲ್‌ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸರ್ಕಾರ ಸಂಪುಟದಲ್ಲಿ ಚರ್ಚಿಸಿ ವಿತರಿಸಲು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಶೂ ವಿತರಿಸಲು ಶಾಲಾಭಿವೃದ್ಧಿ ಸಮಿತಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಲಾಗುವುದು. ಬಿಬಿಎಂಪಿ ಶಾಲೆಗಳನ್ನು ಇಲಾಖೆ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕವಾಗಿದ್ದು, ಈ ಬಗ್ಗೆ ಜೂನ್ 4ರ ನಂತರ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದೂ ಮಾಹಿತಿ ನೀಡಿದರು.’ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಎರಡು ಗ್ರಾಮ ಪಂಚಾಯಿತಿಗೊಂದಂತೆ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುಗುತ್ತಿದೆ. ಶಿಕ್ಷಕರ ನೇಮಕಾತಿಗೂ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.’ಖಾಸಗಿ ಶಾಲೆಗಳಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿಯೂ ಬೇಸಿಗೆಯಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗುವುದು’ ಎಂದರು.

Previous Post
ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತಗಾಗಿ- ಉಪರಾಷ್ಟ್ರಪತಿ ಕರೆ
Next Post
ಸರ್ಕಾರದಿಂದ ನೀತಿ ಸಂಹಿತೆ ಉಲ್ಲಂಘನೆ- ಚುನಾವಣಾ ಆಯೋಗದಿಂದ ಚಾಟಿ

Recent News