ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ

ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ

ನವದೆಹಲಿ : ಅಮರನಾಥ ಯಾತ್ರೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿದೆ. ಈ ಹಿನ್ನಲೆ‌ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ರಾಷ್ಟ್ರೀಯ ನಾಯಕತ್ವವು ರಾಜ್ಯ ಬಿಜೆಪಿ ನಾಯಕರಿಗೆ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ತಡರಾತ್ರಿ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ರಾಜ್ಯ ಘಟಕದ ನಾಯಕರಿಗೆ ಚುನಾವಣೆಗೆ ತಯಾರಿ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಪಕ್ಷವು ಎಲ್ಲ 90 ಸ್ಥಾನಗಳಲ್ಲೂ ಸ್ಪರ್ಧಿಸಲಿದೆ ಎಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ನಾಯಕತ್ವ ರಾಜ್ಯ ನಾಯಕರಿಗೆ ತಿಳಿಸಿದೆ. ಆದಾಗ್ಯೂ, ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಳ್ಳಬಹುದು. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪಕ್ಷವು ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಕೇಂದ್ರದ ಪ್ರಮುಖ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಪಕ್ಷವು ರಾಜ್ಯದ ಜನರೊಂದಿಗೆ ಜನ ಸಂಪರ್ಕ ಕಾರ್ಯಕ್ರಮವನ್ನೂ ಆರಂಭಿಸಲಿದೆ. ಪ್ರಸ್ತುತ ರವೀಂದರ್ ರೈನಾ ರಾಜ್ಯ ಬಿಜೆಪಿ ಘಟಕದಲ್ಲಿ ನಾಯಕತ್ವ ಹೊಂದಿದ್ದು ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎನ್ನಲಾಗಿದೆ.

ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರೈನಾ, ಜಮ್ಮು ಮತ್ತು ಕಾಶ್ಮೀರದ ಪಕ್ಷದ ಸಂಸದರು, ಜಿತೇಂದ್ರ ಸಿಂಗ್ ಮತ್ತು ಜುಗಲ್ ಕಿಶೋರ್ ಶರ್ಮಾ ಮತ್ತು ಇತರ ಉನ್ನತ ನಾಯಕರು ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 2019 ರಲ್ಲಿ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುನ್ನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸಲಾಯಿತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು.

Previous Post
ಚಂಪೈ ಸೊರೇನ್ ರಿಸೈನ್..! : ಹೇಮಂತ್ ಸೊರೇನ್ 3 ನೇ ಬಾರಿಗೆ ಜಾರ್ಖಂಡ್‌ ಸಿಎಂ?
Next Post
ಹತ್ರಾಸ್‌ನಲ್ಲಿ ಕಾಲ್ತುಳಿತದಲ್ಲಿ ಮೃತರಾದ ಕುಟುಂಬಸ್ಥರನ್ನ ಭೇಟಿ ಪರಿಹಾರದ ಮೊತ್ತ ಹೆಚ್ಚಿಸಲು ರಾಹುಲ್ ಗಾಂಧಿ ಒತ್ತಾಯ

Recent News