ರೈತರ ಹರಿಯಾಣ ಪ್ರವೇಶ ತಡೆ ಅಸಾಧ್ಯ: ಶಂಭು ಗಡಿ ತೆರೆವಿಗೆ ಹೈಕೋರ್ಟ್ ಆದೇಶ

ರೈತರ ಹರಿಯಾಣ ಪ್ರವೇಶ ತಡೆ ಅಸಾಧ್ಯ: ಶಂಭು ಗಡಿ ತೆರೆವಿಗೆ ಹೈಕೋರ್ಟ್ ಆದೇಶ

ನವದೆಹಲಿ, ಜು. 11: ಒಂದು ವಾರದೊಳಗೆ ಶಂಭು ಗಡಿಯನ್ನು ತೆರೆಯುವಂತೆ ಹರಿಯಾಣ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. ಪ್ರತಿಭಟನಾ ನಿರತ ರೈತರು ದೆಹಲಿಗೆ ಮೆರವಣಿಗೆ ಮಾಡುವುದನ್ನು ತಡೆಯಲು ಫೆಬ್ರವರಿಯಲ್ಲಿ ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯನ್ನು ಮುಚ್ಚಲಾಗಿದೆ. ಉದಯ್ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮನವಿಗೆ ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಜಿಎಸ್ ಸಂಧವಾಲಿಯಾ ಮತ್ತು ವಿಕಾಸ್ ಬಹ್ಲ್ ಅವರ ಪೀಠ, ಶಂಭು ಗಡಿಯನ್ನು ತೆರೆಯುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಕೇಂದ್ರ ಮತ್ತು ಹರಿಯಾಣ ಸರ್ಕಾರಗಳು ಹೇರಿರುವ ತಡೆಯ ತೆರವಿಗೆ ಕೋರಿ ಫೆಬ್ರವರಿಯಲ್ಲಿ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗಡಿ ತೆರೆಯುವಾಗ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎರಡೂ ರಾಜ್ಯಗಳ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ. ಫೆಬ್ರವರಿಯಲ್ಲಿ, ಪಂಜಾಬ್‌ನಿಂದ ರೈತರ ಗುಂಪುಗಳು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ದೆಹಲಿಗೆ ಮೆರವಣಿಗೆ ಆರಂಭಿಸಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಯೂನಿಯನ್‌ಗಳ ನೇತೃತ್ವದಲ್ಲಿ ಸಾವಿರಾರು ಪ್ರತಿಭಟನಾಕಾರರು ಫೆಬ್ರವರಿ 13 ರಿಂದ ಪಂಜಾಬ್-ಹರಿಯಾಣ ಗಡಿಯ ಹಲವು ಸ್ಥಳಗಳಲ್ಲಿ ನೆಲೆಸಿದ್ದಾರೆ. ಹರಿಯಾಣ ರಾಜ್ಯ ಪೊಲೀಸರು ರೈತರು ಗಡಿ ದಾಟಿದಂತೆ ಅವರ ಮೇಲೆ ಬಲ ಪ್ರಯೋಗ ನಡೆಸಿದ್ದಾರೆ. “ಭದ್ರತೆಯ ದೃಷ್ಠಿಯಿಂದ ರೈತರು ತಮ್ಮ ಧರಣಿಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಸ್ಥಳಾಂತರಿಸಿದರೆ ಮತ್ತು ತಮ್ಮ ಟ್ರ್ಯಾಕ್ಟರ್-ಟ್ರಾಲಿಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ತೆಗೆದರೆ ಮಾತ್ರ ಬ್ಯಾರಿಕೇಡ್ ತೆರವುಗೊಳಿಸುತ್ತೇವೆ” ಎಂದು ಈ ಹಿಂದೆ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ, ಹರಿಯಾಣದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೀಪಕ್ ಸಬರ್ವಾಲ್ ಅವರು, “ಪಂಜಾಬ್‌ನಿಂದ ಸುಮಾರು 400 ರಿಂದ 450 ಪ್ರತಿಭಟನಾಕಾರರು ರಾಜ್ಯಕ್ಕೆ ಪ್ರವೇಶಿಸಲು ಮತ್ತು ಅಂಬಾಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲು ಯೋಜಿಸುತ್ತಿದ್ದಾರೆ” ಎಂದು ಹೇಳಿದ್ದರು. “ಪೊಲೀಸರು ರೈತರಿಗೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ. ರೈತರು ಹರಿಯಾಣ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ. ಗಡಿ ಮುಚ್ಚಿರುವುದರಿಂದ ಸಾರಿಗೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ” ಎಂದು ಹೈಕೋರ್ಟ್ ಪೀಠ ಹೇಳಿದೆ ಎಂದು ವರದಿಯಾಗಿದೆ.

Previous Post
ಸಲಿಂಗ ವಿವಾಹ ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ಹಿಂಸರಿದ ನ್ಯಾ. ಸಂಜೀವ್‌ ಖನ್ನಾ
Next Post
ಜೈಲುಗಳಲ್ಲೂ ಜಾತಿ ತಾರತಮ್ಯ ವಿಷಾದಕರ: ಸುಪ್ರೀಂ

Recent News