CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ನವದೆಹಲಿ, ಮಾರ್ಚ್ 19: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, 2019 (ಸಿಎಎ) ಅನುಷ್ಠಾನವನ್ನು ಪ್ರಶ್ನಿಸಿ 200 ಕ್ಕೂ ಹೆಚ್ಚು ಅರ್ಜಿಗಳ ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್ ಮಾರ್ಚ್ 19 ರ ಮಂಗಳವಾರ ವಿಚಾರಣೆ ನಡೆಸಲಿದೆ. 230ಕ್ಕೂ ಹೆಚ್ಚು ಅರ್ಜಿಗಳು ಸಿಎಎ ಮತ್ತು ಪೌರತ್ವ ತಿದ್ದುಪಡಿ ನಿಯಮಗಳು 2024 ರ ಅನುಷ್ಠಾನಕ್ಕೆ ತಡೆ ಕೋರಿವೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಕಳೆದ ವಾರ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ಗೆ ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಲ್ಲಿಸಿದ ಮನವಿಯನ್ನು ಪ್ರಸ್ತಾಪಿಸಿ, ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ವಿವಾದಾತ್ಮಕ ಕಾನೂನನ್ನು ಜಾರಿಗೊಳಿಸುವ ಕೇಂದ್ರದ ಕ್ರಮವು ಪ್ರಶ್ನಾರ್ಹವಾಗಿದೆ ಎಂದು ಹೇಳಿದ್ದರು.
ಸಿಎಎ ಕಾನೂನನ್ನು ಪ್ರಶ್ನಿಸಿ ಅರ್ಜಿದಾರರು ಸಿಎಎ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ತಾರತಮ್ಯ ಉಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ. ಇಂತಹ ಧಾರ್ಮಿಕ ಪ್ರತ್ಯೇಕತೆಯು ಯಾವುದೇ ಸಮಂಜಸವಾದ ವ್ಯತ್ಯಾಸವಿಲ್ಲದೆ ಮತ್ತು ಆರ್ಟಿಕಲ್ 14 ರ ಅಡಿಯಲ್ಲಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿದೆ.

ಐಯುಎಂಎಲ್ ಅಲ್ಲದೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಅಸ್ಸಾಂ ಕಾಂಗ್ರೆಸ್ ನಾಯಕ ದೇಬಬ್ರತ ಸೈಕಿಯಾ, ರಿಹಾಯ್ ಮಂಚ್ ಮತ್ತು ಸಿಟಿಜನ್ಸ್ ಅಗೇನ್ಸ್ಟ್ ಹೇಟ್, ಅಸ್ಸಾಂ ಅಡ್ವೊಕೇಟ್ಸ್ ಅಸೋಸಿಯೇಷನ್ ಎಂಬ ಎನ್‌ಜಿಒಗಳು ಮತ್ತು ಕೆಲವು ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಐಯುಎಂಎಲ್, ದೇಬಬ್ರತ ಸೈಕಿಯಾ, ಅಸೋಮ್ ಜಾತಿಯತಬಾದಿ ಯುಬ ಛತ್ರ ಪರಿಷತ್ (ಪ್ರಾದೇಶಿಕ ವಿದ್ಯಾರ್ಥಿ ಸಂಘಟನೆ), ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಿಎಎಗೆ ವಿರೋಧ ವ್ಯಕ್ತಪಡಿಸಿವೆ. 2020 ರಲ್ಲಿ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ತೆರಳಿದ್ದ ಮೊದಲ ರಾಜ್ಯ ಕೇರಳ, ಇದು ಭಾರತೀಯ ಸಂವಿಧಾನವು ನೀಡಿದ ಸಮಾನತೆಯ ಹಕ್ಕಿನ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಇದಲ್ಲದೆ, ಸಿಎಎ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಪ್ರಕರಣವನ್ನೂ ದಾಖಲಿಸಿದೆ. ಸಂಸದ ಅಸಾದುದ್ದೀನ್ ಒವೈಸಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, “ಸಿಎಎ ಪೌರತ್ವದ ಮಂಜೂರಾತಿಯನ್ನು ಒಳಗೊಂಡಿಲ್ಲ, ಆದರೆ ಪೌರತ್ವದ ನಿರಾಕರಣೆ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತ್ಯೇಕಿಸಿ ಅವರ ವಿರುದ್ಧ ಆಯ್ದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ . 2019 ರಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮೂಲಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಯೋಜನೆ ಮಾಡಲಾಗುತ್ತಿದೆ” ಎಂದು ಎಐಎಂಐಎಂ ಮುಖ್ಯಸ್ಥರು ಆರೋಪಿಸಿದ್ದಾರೆ. ಇನ್ನು, ಪ್ರಕರಣದ ಉದ್ದಕ್ಕೂ, ಕೇಂದ್ರವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಇದು ನಾಗರಿಕರ ಕಾನೂನು, ಪ್ರಜಾಸತ್ತಾತ್ಮಕ ಅಥವಾ ಜಾತ್ಯತೀತ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಈ ಕಾಯ್ದೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ವಿನಂತಿಸಿದೆ. ಮಾರ್ಚ್ 11 ರಂದು, ಕೇಂದ್ರ ಸರ್ಕಾರವು ಡಿಸೆಂಬರ್ 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಐದು ವರ್ಷಗಳ ನಂತರ ಸಿಎಎಯನ್ನು ಜಾರಿಗೆ ತಂದಿತು. ಇದನ್ನು ವಿರೋಧಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳನ್ನು ಮಾಡಲಾಯಿತು. ಆದರೆ, ಕೊರೊನಾ ಕಾರಣದಿಂದಾಗಿ ಪ್ರತಿಭಟನೆ ಸ್ಥಗಿತವಾಗಿತ್ತು. ಈ ಕಾಯ್ದೆಯು ಡಿಸೆಂಬರ್ 31, 2014ರ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಹೊಂದಿದೆ. ಇವರೆಲ್ಲಾ ಅವರ ತಾಯ್ನಾಡಿನಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಕಾರಣ ಭಾರತಕ್ಕೆ ಬಂದವರು.

Previous Post
ದಳಪತಿಗಳು ಏನೇ ಅಂದ್ರೂ ಮಂಡ್ಯ ನಂದೇ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸುಮಲತಾ
Next Post
ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ

Recent News