INDIA ಬ್ಲಾಕ್ ನಲ್ಲಿ ಬಿರುಕು, ಕಾಂಗ್ರೆಸಿನಲ್ಲಿ ಚುರುಕು

INDIA ಬ್ಲಾಕ್ ನಲ್ಲಿ ಬಿರುಕು, ಕಾಂಗ್ರೆಸಿನಲ್ಲಿ ಚುರುಕು

ಸಾಮಾನ್ಯವಾಗಿ ಚುನಾವಣೆ ತಯಾರಿ ವಿಷಯಕ್ಕೆ ಬಂದರೆ ಬಿಜೆಪಿ ಮುಂದಿರುತ್ತದೆ. ಆದರೆ ಈಗ ಕಾಂಗ್ರೆಸ್ ಪಕ್ಷದಲ್ಲೂ ಅಂಥ ವೇಗ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಗೆದ್ದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿ ಇರುತ್ತಿತ್ತು. ಕಾಂಗ್ರೆಸ್ ಪಕ್ಷವೇ ಅಜೆಂಡಾ‌ ಸೆಟ್ ಮಾಡುತ್ತಿತ್ತು. ಕಾಂಗ್ರೆಸ್ ಸೆಟ್ ಮಾಡಿದ ಅಜೆಂಡಾಕ್ಕೆ ಬಿಜೆಪಿ ಪ್ರತಿಕ್ರಿಯಿಸಬೇಕಾಗಿತ್ತು. ಈ ಮಾಡೆಲ್ ಅನ್ನು ವಿಶೇಷವಾಗಿ ‘ಕರ್ನಾಟಕ ಮಾಡೆಲ್’ ಅನ್ನು ಈಗ ಲೋಕಸಭಾ ಚುನಾವಣೆಯಲ್ಲೂ ಅನುಸರಿಸುತ್ತಿರುವಂತೆ ಕಾಣುತ್ತಿದೆ.

ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ರಾಜಕೀಯದಲ್ಲಿ ಅತ್ಯಗತ್ಯ. ಆದರೆ ಕಾಂಗ್ರೆಸ್ ಏನನ್ನೂ ನಿರ್ಧರಿಸುವುದಕ್ಕೂ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಬಹುತೇಕ ಸಂದರ್ಭಗಳಲ್ಲಿ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿರುತ್ತಿತ್ತು. ಈಗ ಬೇಗ ನಿರ್ಧಾರ ಕೈಗೊಳ್ಳುವ ನಿರ್ಧಾರ ಮಾಡಿದೆ. ಅದೇ ಆ ಪಕ್ಷದಲ್ಲಾಗಿರುವ ಅತಿ ದೊಡ್ಡ ಬದಲಾವಣೆ.

ಮೊದಲಿಗೆ INDIA ಮೈತ್ರಿಕೂಟದಲ್ಲಿ ಎಷ್ಟೇ ಅಸಮಾಧಾನ ಇದ್ದರೂ ಕಾಂಗ್ರೆಸ್ ಏಕಕಾಲಕ್ಕೆ ‘ಅದನ್ನು ಸರಿಪಡಿಸುವ’ ಮತ್ತು ‘ಸಾಧ್ಯವಾಗದಿದ್ದರೆ ಒಂದು ಪಕ್ಷವಾಗಿ ತಾನು ಹೇಗೆ ಅಣಿಯಾಗಬೇಕು’ ಎಂಬ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಇದರ ಪರಿಣಾಮವಾಗಿ ಒಂದೆಡೆ INDIA ಮೈತ್ರಿಕೂಟದ ವಿಚಾರವಾಗಿ ಬಿಹಾರ, ಪಶ್ವಿಮ ಬಂಗಾಳ, ಪಂಜಾಬ್ ಮತ್ತು ದೆಹಲಿಯಲ್ಲಿ ಸರಿಪಡಿಸುವ ಕೆಲಸ ಮಾಡುತ್ತಿದೆ. ಸಂಕೀರ್ಣತೆ ಇರುವ ಪಶ್ಚಿಮ ಬಂಗಾಳ ಮತ್ತು ಬಿಹಾರದ ವಿಚಾರವಾಗಿ ಮಾತನಾಡದೆ ಸಮಸ್ಯೆ ಉಲ್ಬಣವಾಗುವುದನ್ನು ತಡೆಯುತ್ತಿದೆ. ಸೀಟು ಹಂಚಿಕೆ ಸಮಸ್ಯೆ ಇರುವ ಪಂಜಾಬ್ ಮತ್ತು ದೆಹಲಿ ವಿಚಾರದಲ್ಲಿ ಆಮ್ ಆದ್ಮಿ ಪಕ್ಷದ ಜೊತೆಗೆ ಮಾತುಕತೆ ನಡೆಸುತ್ತಿದೆ.

ಒಂದೊಮ್ಮೆ ಮುಂದೆ INDIA ಮೈತ್ರಿಕೂಟದ ಪಕ್ಷಗಳು ಕೆಲವು ಕಡೆ ಕೈ ಕೊಟ್ಟರೆ ಅಂತಹ ಪರಿಸ್ಥಿತಿ ನಿಭಾಯಿಸುವುದಕ್ಕೂ ಸನ್ನದ್ಧಗೊಳ್ಳುತ್ತಿದೆ. ಇದೇ ಹಿನ್ನೆಲೆಯಲ್ಲಿ 543 ಲೋಕಸಭಾ ಕ್ಷೇತ್ರಗಳ ಪೈಕಿ 539 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ. 539 ಕ್ಷೇತ್ರಗಳಿಗೆ ಒಂದೇ ಸಲಕ್ಕೆ ವೀಕ್ಷಕರನ್ನು ನೇಮಕ ಮಾಡಿರುವುದು ಕೂಡ ಬಹಳ ಆಶ್ಚರ್ಯಕರ ಬೆಳವಣಿಗೆಯಾಗಿದೆ. ಈ ಮೂಲಕ ತಾನು ದೇಶಾದ್ಯಂತ ಚುನಾವಣೆಗೆ ಅಣಿಯಾಗುತ್ತಿರುವ ಸಂದೇಶವನ್ನು ಮೈತ್ರಿಕೂಟಕ್ಕೆ ಮತ್ತು ಎದುರಾಳಿ ಬಿಜೆಪಿಗೆ ರವಾನಿಸಿದೆ.

ಅಷ್ಟೇಯಲ್ಲ, ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ರೂಪಿಸಲು ಕೇಂದ್ರದ ಮಾಜಿ ಸಚಿವ ಪಿ.‌ ಚಿದಂಬರಂ ನೇತೃತ್ವದಲ್ಲಿ ಸಮಿತಿ ಮಾಡಿದೆ. ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಆ ಮೂಲಕ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿಗಳಿರಲಿವೆ ಎಂಬ ಸುಳಿವನ್ನು ನೀಡಿದೆ. ಇದಲ್ಲದೆ ಚುನಾವಣೆಗೆ ನೀತಿ-ನಿರೂಪಣೆ, ಪ್ರಚಾರ-ಪ್ರವಾಸ, ವಸ್ತು-ವಿಷಯಗಳನ್ನು ನಿರ್ಧರಿಸಲು ‘ವಾರ್ ರೂಂ’ ಅನ್ನು ಸೆಟ್ ಅಪ್ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ‌ ಶಶಿಕಾಂತ್ ಸೇಂಥಿಲ್ ವಾರ್ ರೂಂ ಮುಖ್ಯಸ್ಥರಾಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ಸನಿಹದಲ್ಲಿ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ಹಮ್ಮಿಕೊಂಡಿದೆ. ಯಾತ್ರೆಯನ್ನು ಈ ಭಾರಿ ಸ್ವಲ್ಪ ಭಿನ್ನವಾಗಿ ರೂಪಿಸಿದಂತಿದೆ.‌ ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಯಾದ ಮಣಿಪುರದಿಂದ ಆರಂಭವಾಗುವ ಭಾರತ್ ಜೋಡೋ ನ್ಯಾಯ ಯಾತ್ರೆಯು ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮೂಲಕ ಮಹಾರಾಷ್ಟ್ರ ತಲುಪಲಿದೆ. ಇದು ಒಟ್ಟು 14 ರಾಜ್ಯಗಳ 85 ಜಿಲ್ಲೆಗಳಲ್ಲಿ 6,700 ಕಿ.ಮೀ. ಕ್ರಮಿಸಲಿದೆ. ಚುನಾವಣೆ ಹೊಸ್ತಿಲಲ್ಲಿ ಸಮಯ ಬಹಳ ಮುಖ್ಯ ಆಗಿರುವುದರಿಂದ ರಾಹುಲ್ ಗಾಂಧಿ ಕೆಲವು ಕಡೆ ಪಾದಯಾತ್ರೆಯಲ್ಲಿ ಮತ್ತು ಕೆಲವು ಕಡೆ ಬಸ್‌ ಮೂಲಕ ಸಾಗಲಿದ್ದಾರೆ. ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಸ್ಥಳೀಯರ ಜೊತೆಗೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿಯವರ ರೀಚ್ ಹೆಚ್ಚಿಸಲು ಕಾಂಗ್ರೆಸ್ ಈ ಕ್ರಮ ಅನುಸರಿಸಿದೆ.

ನಿತೀಶ್ ಗೆ ಬ್ರೇಕ್ ಹಾಕಲು ಮಮತಾ ಸ್ಕೆಚ್

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಸರು INDIA ಮೈತ್ರಿಕೂಟದ ಸಂಚಾಲಕನ ಸ್ಥಾನಕ್ಕೆ ಕೇಳಿಬರುತ್ತಿದೆ. ಅದನ್ನು ತಡೆಯಬೇಕು ಎನ್ನುವುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಲೋಚನೆ. ಸದ್ಯ ನಿತೀಶ್ ಕುಮಾರ್ INDIA ಮೈತ್ರಿಕೂಟದ ಸಂಚಾಲಕರಾಗಿ ಹೊರಹೊಮ್ಮಿದರೆ ಪರೋಕ್ಷವಾಗಿ ಅವರೇ ಪ್ರಧಾನಿ ಅಭ್ಯರ್ಥಿ ಎಂದೂ ಬಿಂಬಿತರಾಗುತ್ತಾರೆ. ಅದು ಆಗಬಾರದು. ಫಲಿತಾಂಶ ಬಂದ ಮೇಲೆ ಸಂಖ್ಯೆಗಳನ್ನು ಇಟ್ಟುಕೊಂಡು ಪ್ರಧಾನಿ ಸ್ಥಾನಕ್ಕೆ ಚೌಕಾಸಿ ಮಾಡಬಹುದು. ಹೇಗೂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಟಿಎಂಸಿಗಿಂತ ಜಾಸ್ತಿ ಸೀಟು ಗೆಲ್ಲಲ್ಲ ಎನ್ನುವುದು ಮಮತಾ ಲೆಕ್ಕಾಚಾರ. ಅದೂ ಅಲ್ಲದೇ ಸದ್ಯಕ್ಕೆ ಪ್ರಧಾನ ಮಂತ್ರಿ ಸ್ಥಾನ ಸಿಗದಿದ್ದರೂ ಈ ಚುನಾವಣೆ ಬಳಿಕ ರಾಷ್ಟ್ರ ರಾಜಕೀಯದಲ್ಲಿ ನಿತೀಶ್ ಕುಮಾರ್ ಪ್ರಭಾವ ಕಡಿಮೆಯಾಗಲಿದೆ. ಆಗ ತಾವು ನಿರ್ಣಾಯಕ ಪಾತ್ರವಹಿಸಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಮಮತಾ ಬ್ಯಾನರ್ಜಿಯವರ ಎರಡನೇ ಆಲೋಚನೆ ಅರವಿಂದ ಕೇಜ್ರಿವಾಲ್ ಅವರ ಮೊದಲ ಆಲೋಚನೆ ಆಗಿದೆ. ಅದೇ ಕಾರಣಕ್ಕೆ ಕೇಜ್ರಿವಾಲ್ ಕೂಡ ನಿತೀಶ್ ಕುಮಾರ್‌ ಮೈತ್ರಿಕೂಟದ ಸಂಚಾಲಕರಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ದೀದಿ ಮತ್ತು ಕ್ರೇಜಿ ಸಮಾನ ಗುರಿ ಹೊಂದಿರುವ ಕಾರಣದಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಮಾಡಿ ಎಂದು ಹೇಳುತ್ತಿದ್ದಾರೆ. ರಾಜಕೀಯದಲ್ಲಿ ಯಾರನ್ನೋ ನಿಯಂತ್ರಿಸಲು ಮತ್ಯಾರ ಮೇಲೋ ಪ್ರೀತಿ ಉಕ್ಕಿ‌ ಹರಿಯುವುದು ಸಾಮಾನ್ಯ.

Previous Post
1 ರಾಷ್ಟ್ರ, 1 ಚುನಾವಣೆ ಕಲ್ಪನೆ ‘ಪ್ರಜಾಪ್ರಭುತ್ವ ವಿರೋಧಿ’: ಸಿಪಿಐ(ಎಂ)
Next Post
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಲು ಸ್ವಾಮೀಜಿಗಳು-ಚಿಂತಕರ ಒಕ್ಕೋರಲ ಒತ್ತಾಯ ಕ್ಯಾಬಿನೆಟ್ ನಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News