TMC ಏಕಾಂಗಿ ಸ್ಪರ್ಧೆ: ಮಮತಾ ಘೋಷಣೆ

TMC ಏಕಾಂಗಿ ಸ್ಪರ್ಧೆ: ಮಮತಾ ಘೋಷಣೆ

ಕೊಲ್ಕತ್ತಾ, ಜ. 24: ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪ್ರತಿಪಕ್ಷಗಳ INDIA ಮೈತ್ರಿಕೂಟಕ್ಕೆ ಇದು ದೊಡ್ಡ ಹಿನ್ನೆಡೆಯಾಗಿದ್ದು, ಬಂಗಾಳದಲ್ಲಿ ಮೈತ್ರಿ ಬಾಗಿಲು ಮುಚ್ಚಿದೆ ಎಂದು ಹೇಳಲಾಗುತ್ತಿದೆ.

ನಾನು ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ, ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಮ್ಮದು ಜಾತ್ಯತೀತ ಪಕ್ಷ ಮತ್ತು ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ. ನಾನು ಅನೇಕ ಪ್ರಸ್ತಾಪಗಳನ್ನು ನೀಡಿದ್ದೇನೆ ಆದರೆ ಅವರು ಅವುಗಳನ್ನು ಮೊದಲಿನಿಂದಲೂ ತಿರಸ್ಕರಿಸಿದರು. ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆಯು ಬಂಗಾಳದ ಮೂಲಕ ಹಾದುಹೋಗುವ ಬಗ್ಗೆ ತನಗೆ ತಿಳಿಸಲಾಗಿಲ್ಲ ಎಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಾನು ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದರೂ ಸೌಜನ್ಯಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬರುವುದಾಗಿ ಅವರು ನನಗೆ ತಿಳಿಸಿಲ್ಲ, ಹಾಗಾಗಿ ಬಂಗಾಳದ ಮಟ್ಟಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ. ನಮ್ಮದು ಜಾತ್ಯತೀತ ಪಕ್ಷ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಬಂಗಾಳ ರಾಜ್ಯ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌದರಿ ಅವರು ಬಂಗಾಳದ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಂತರ ತೃಣಮೂಲ ಮತ್ತು ಕಾಂಗ್ರೆಸ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅಧೀರ್ ಚೌಧರಿ ಅವರು 2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ದಯೆಯಿಂದ ಅಧಿಕಾರಕ್ಕೆ ಬಂದರು. ಈ ಬಾರಿ ಮಮತಾ ಬ್ಯಾನರ್ಜಿ ಕೃಪೆಯಿಂದ ಚುನಾವಣೆ ನಡೆಯುವುದಿಲ್ಲ. ಚುನಾವಣೆಯನ್ನು ಹೇಗೆ ಎದುರಿಸಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ಮಮತಾ ಬ್ಯಾನರ್ಜಿ ಅವಕಾಶವಾದಿ ಎಂದು ಹೇಳಿದ್ದರು.

ಭಾರತ್‌ ಜೋಡೋ ನ್ಯಾಯ ಯಾತ್ರೆ ಹಿನ್ನೆಲೆ ಅಸ್ಸಾಂನಲ್ಲಿರುವ ರಾಹುಲ್ ಗಾಂಧಿ, ಅಧೀರ್‌ ರಂಜನ್‌ ಚೌಧರಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸಿದ್ದರು. ಟಿಎಂಸಿ ಮುಖ್ಯಸ್ಥರೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ, ಈ ಬಗ್ಗೆ ನಾನು ಇಲ್ಲಿ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಮಮತಾ ಬ್ಯಾನರ್ಜಿ ನನಗೆ ಮತ್ತು ನಮ್ಮ ಪಕ್ಷಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಕೆಲವೊಮ್ಮೆ ನಮ್ಮ ನಾಯಕರು ಏನಾದರೂ ಹೇಳುತ್ತಾರೆ, ಅವರ ನಾಯಕರು ಕೂಡ ಏನಾದರೊಂದು ಹೇಳುತ್ತಾರೆ, ಈ ಹೇಳಿಕೆಗಳು ಮುಂದುವರಿಯುತ್ತದೆ. ಇದು ಸಹಜ ಎಂದು ಹೇಳಿದ್ದರು.

ತೃಣಮೂಲ ಕಾಂಗ್ರೆಸ್ ಬಂಗಾಳದ 42 ಸ್ಥಾನಗಳಲ್ಲಿ ಗರಿಷ್ಠ ಮೂರು ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರೆ, ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು.

 

 

Previous Post
ಮೈತ್ರಿಕೂಟದಲ್ಲಿ ಬಿರುಕು; ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಎಂದ ಎಎಪಿ!
Next Post
ರಾಹುಲ್ ಗಾಂಧಿ ವಿರುದ್ಧ ಪೊಲೀಸ್ ಪ್ರಕರಣ ದಾಖಲು

Recent News