ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

ಹೈದರಾಬಾದ್, ಮೇ 4: ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.

ಚುನಾವಣಾ ರ್ಯಾಲಿಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಸಂಪುಟ ಸಹೋದ್ಯೋಗಿ ಮತ್ತು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ, ಗೋಶಾಮಹಲ್ ಶಾಸಕ ಟಿ. ರಾಜಾ ಸಿಂಗ್, ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮತ್ತು ಹೈದರಾಬಾದ್‌ನ ಬಿಜೆಪಿ ನಾಯಕ ಟಿ. ಯಮನ್ ಸಿಂಗ್ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರದ ಪೋಟೋ ವೈರಲ್‌ ಆಗಿದೆ. ಅದರಲ್ಲಿ ಮಕ್ಕಳು ಬಿಜೆಪಿ ಫಲಕಗಳು ಮತ್ತು ಬಲೂನ್‌ಗಳನ್ನು ಹಿಡಿದಿದ್ದರು ಮತ್ತು ಸಚಿವರು ಮತ್ತು ಇತರ ಬಿಜೆಪಿ ಪದಾಧಿಕಾರಿಗಳೊಂದಿಗೆ ವೇದಿಕೆಯಲ್ಲಿ ನಿಂತುಕೊಂಡಿದ್ದಾರೆ.

ಮೊಘಲ್‌ಪುರ ಪೊಲೀಸರು ಗುರುವಾರ ದಾಖಲಿಸಿದ ಎಫ್‌ಐಆರ್‌ನಲ್ಲಿ ಅಮಿತ್‌ ಶಾ ಅವರನ್ನು ಆರೋಪಿ ನಂ.3 ಎಂದು ಹೆಸರಿಸಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಜಿ ನಿರಂಜನ್ ಅವರು ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ ನಂತರ ಅಮಿತ್‌ ಶಾ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚುನಾವಣಾ ಆಯೋಗವು ಇತ್ತೀಚೆಗೆ ಚುನಾವಣಾ ಸಂಬಂಧಿತ ಪ್ರಚಾರ ಅಥವಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾಗಿ ನಿರ್ದೇಶಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ.1ರಂದು ಹೈದರಾಬಾದ್ ಲೋಕಸಭಾ ಕ್ಷೇತ್ರದ ಲಾದರ್ವಾಜಾದಿಂದ ಸುಧಾ ಟಾಕೀಸ್‌ವರೆಗೆ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ರ್ಯಾಲಿಯು ಸುಧಾ ಟಾಕೀಸ್‌ನಲ್ಲಿ ಸಾರ್ವಜನಿಕ ಸಭೆಯೊಂದಿಗೆ ಸಮಾಪ್ತಿಯಾಗಿತ್ತು, ಅಲ್ಲಿ ವೇದಿಕೆಯಲ್ಲಿ ಅಮಿತ್ ಶಾ ಅವರೊಂದಿಗೆ ಕೆಲವು ಮಕ್ಕಳನ್ನು ಕಾಣಬಹುದು. ಅದರಲ್ಲಿ ಓರ್ವ ಮಗು ಬಿಜೆಪಿ ಭಾವುಟ ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ. ಇದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಘಟನೆಯ ಕುರಿತು ತನಿಖೆ ನಡೆಸುವಂತೆ ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ. ಹೈದರಾಬಾದ್ ಪೊಲೀಸ್ ಕಮಿಷನರ್ ಕೊತಕೋಟಾ ಶ್ರೀನಿವಾಸ್ ರೆಡ್ಡಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದಕ್ಷಿಣ ವಲಯ ಡಿಸಿಪಿ ಸ್ನೇಹಾ ಮೆಹ್ರಾ ಅವರಿಗೆ ಆದೇಶ ನೀಡಿದ್ದಾರೆ. ಆದೇಶದ ನಂತರ ಮೊಘಲ್ಪುರ ಪೊಲೀಸರು ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Previous Post
ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಸ್ವಲ್ಪವೂ ಸಹಾನುಭೂತಿ ಇಲ್ಲದ ಮೋದಿ: ಮಲ್ಲಿಕಾರ್ಜುನ ಖರ್ಗೆ
Next Post
ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ಒತ್ತಾಯಿಸಿ ತೆಲಂಗಾಣ ಸಿಎಂ ಭೇಟಿ ಮಾಡಿದ ರಾಧಿಕಾ ವೇಮುಲಾ

Recent News