ಇಂದು ಮೊದಲ ಹಂತದ ಚುನಾವಣೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ಬಿಗಿ ಭದ್ರತೆ, ಚು.ಆಯೋಗದ ಸಕಲ ಸಿದ್ಧತೆ

ಇಂದು ಮೊದಲ ಹಂತದ ಚುನಾವಣೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ಬಿಗಿ ಭದ್ರತೆ, ಚು.ಆಯೋಗದ ಸಕಲ ಸಿದ್ಧತೆ

ನವದೆಹಲಿ : ಲೋಕಸಭೆ ಚುನಾವಣೆಯ ಮೊದಲ‌ ಹಂತದ ಮತದಾನ ಇಂದು ನಡೆಯಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನದ ಹಿನ್ನಲೆ ಕೇಂದ್ರ ಚುನಾವಣಾ ಆಯೋಗ ಎಲ್ಲ ತಯಾರಿ ಮಾಡಿಕೊಂಡಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರದ ಭದ್ರತಾ ಪಡೆಗಳನ್ನು ಹೆಚ್ಚಿಸಿದೆ.‌

ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ‌ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12 ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೊದಲ ಹಂತದ ಚುನಾವಣೆಯಲ್ಲಿ ಹಲವು ಮಂದಿ ಪ್ರಮುಖ ನಾಯಕರಿದ್ದಾರೆ. ಈ ಪೈಕಿ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಕಣದಲ್ಲಿರುವ ತೆಲಂಗಾಣ ಮಾಜಿ ರಾಜ್ಯಪಾಲ ಟಿ ಸೌಂದರರಾಜನ್, ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಎ ರಾಜಾ, ಕೇಂದ್ರ ಸಚಿವ ಎಲ್‌ ಮುರುಗನ್‌, ತಮಿಳುನಾಡಿನ ಶಿವಗಂಗೈ ಲೋಕಸಭಾ ಕ್ಷೇತ್ರ ಸ್ಪರ್ಧಿಸಿರುವ ಕಾರ್ತಿ ಚಿದಂಗಬರಂ, ಕೊಯಮತ್ತೂರಿನಿಂದ ಸ್ಪರ್ಧಿಸಿರುವ ಅಣ್ಣಾಮಲೈ

ಉತ್ತರ ಪ್ರದೇಶದ ಮುಜಾಫರ್‌ನಗರ ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ಅಸ್ಸಾಂನ ದಿಬ್ರುಗಢ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಜಮ್ಮು ಮತ್ತು ಕಾಶ್ಮೀರದ ಉಧಂಪುರ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ಸಂಸದ ಜಿತೇಂದ್ರ ಸಿಂಗ್, ರಾಜಸ್ಥಾನದ ಅಲ್ವಾರ್ ಕ್ಷೇತ್ರದಿಂದ ಕಣದಿಳಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಬಿಕಾನೇರ್ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಅರ್ಜುನ್ ಮೇಘವಾಲ್, ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅರುಣಾಚಲ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಮುಖರಾಗಿದ್ದಾರೆ.

ಎಡಿಆರ್ ನೀಡಿರುವ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಸ್ಪರ್ಧಿಸಿರುವ 1618 ಅಭ್ಯರ್ಥಿಗಳ ಪೈಕಿ 252 (ಶೇ. 16) ಮಂದಿ ತಮ್ಮ ವಿರುದ್ಧ “ಕ್ರಿಮಿನಲ್ ಮೊಕದ್ದಮೆ”ಗಳನ್ನು ಘೋಷಿಸಿಕೊಂಡಿದ್ದಾರೆ. 1618 ಅಭ್ಯರ್ಥಿಗಳ ಪೈಕಿ 161 (ಶೇ. 10) ಮಂದಿ ತಮ್ಮ ವಿರುದ್ಧ “ಗಂಭೀರ ಕ್ರಿಮಿನಲ್” ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದಾರೆ. 15 ಅಭ್ಯರ್ಥಿಗಳು ತಮ್ಮ ವಿರುದ್ಧ “ಅಪರಾಧಿ ಪ್ರಕರಣ”ಗಳನ್ನು ಘೋಷಿಸಿದ್ದಾರೆ. ಏಳು ಅಭ್ಯರ್ಥಿಗಳು “ಕೊಲೆ”ಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ “ಮಹಿಳೆಯರ ಮೇಲಿನ ದೌರ್ಜನ್ಯ”ಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ 18 ಅಭ್ಯರ್ಥಿಗಳಿದ್ದಾರೆ. ಈ 18 ಮಂದಿಯ ಪೈಕಿ ಒಬ್ಬ ಅಭ್ಯರ್ಥಿ ವಿರುದ್ಧ ಅತ್ಯಾಚಾರ (ಐಪಿಸಿ-376) ಪ್ರಕರಣ ದಾಖಲಾಗಿದೆ. ಇದಲ್ಲದೆ, ಒಟ್ಟು 35 ಅಭ್ಯರ್ಥಿಗಳು ಪ್ರಚೋದಕ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ 102 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳಲ್ಲಿ ಎನ್‌ಡಿಎ ಒಕ್ಕೂಟ ಗೆದ್ದಿತ್ತು, ಈಪೈಕಿ ಬಿಜೆಪಿಯೊಂದರೆ 40 ಸ್ಥಾನಗಳನ್ನು ಬಾಚಿಕೊಂಡಿತ್ತು. ವಿಪಕ್ಷಗಳ ಇಷ್ಟೆ ಪ್ರಮಾಣ ಸೀಟು ಗೆದ್ದರೂ 21 ಸೀಟು ಗೆಲ್ಲುವ ಮೂಲಕ ಡಿಎಂಕೆ ಪಾರಮ್ಯ ಮೆರೆದಿತ್ತು. ಕಾಂಗ್ರೇಸದ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

Previous Post
ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ; ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ
Next Post
ಇಂದು ಮೊದಲ ಹಂತದ ಮತದಾನ ಹಿನ್ನಲೆ ವಿಶೇಷ ರೈಲ್ವೆ ವ್ಯವಸ್ಥೆ

Recent News