ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನವದೆಹಲಿ, ಏ. 4: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ದೇಶದ ಎಲ್ಲಾ ಚುನಾವಣೆಗಳನ್ನು ನಡೆಸುವಂತೆ ನಿರ್ದೇಶನ ನೀಡಲು ಕೋರಿ ವಕೀಲ ಮೆಹಮೂದ್ ಪ್ರಾಚಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಾಚಾ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 1961ರ ಚುನಾವಣಾ ನಿಯಮಗಳ ನಡವಳಿಕೆಯ ಪ್ರಕಾರ ಕೇವಲ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆಗಳನ್ನು ನಡೆಸಬೇಕು ಎಂದು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣದಲ್ಲಿ ಮಧ್ಯಂತರವಾಗಿ ಮೆಹಮೂದ್ ಪ್ರಾಚಾ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣೆಯಲ್ಲಿ ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಸ್ಲಿಪ್‌ಗಳನ್ನು ಕೂಲಂಕುಷವಾಗಿ ಎಣಿಕೆ ಮಾಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಾರತದ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೇಳಿದೆ. ಜನ ಪ್ರತಿನಿಧಿ ಕಾಯ್ದೆ ಪ್ರಕಾರ ಮತಪತ್ರಗಳ ಬದಲಿಗೆ ಮತಯಂತ್ರಗಳನ್ನು ಬಳಸುವಂತಿಲ್ಲ ಎಂದು ಪ್ರಾಚಾ ಗಮನ ಸೆಳೆದಿದ್ದಾರೆ. ಪ್ರಾಚಾ ಅವರ ಅರ್ಜಿಯನ್ನು ವಕೀಲರಾದ ಆರ್‌ಹೆಚ್‌ಎ ಸಿಕಂದರ್ ಮತ್ತು ಜತಿನ್ ಭಟ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ವಿವಿಪ್ಯಾಟ್ ಸ್ಲಿಪ್‌ಗಳ ಸಂಪೂರ್ಣ ಎಣಿಕೆಗೆ ಕೋರಿ ಸಲ್ಲಿಸಲಾದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ (ಏಪ್ರಿಲ್ 1) ಚುನಾವಣಾ ಆಯೋಗ ಮತ್ತು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.

Previous Post
ಮಾಲೆಗಾಂವ್ ಸ್ಫೋಟ ಪ್ರಕರಣ: ನಿರಂತರವಾಗಿ ಕೋರ್ಟ್‌ಗೆ ಗೈರಾಗುತ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್
Next Post
ಬಿಹಾರದಲ್ಲಿ ಮೋದಿ ಚುನಾವಣಾ ಪ್ರಚಾರ – ಆರ್‌ಜೆಡಿ ವಿರುದ್ಧ ವಾಗ್ದಾಳಿ

Recent News